ನನ್ನ ಪ್ರೀತಿಯ ದೇಶವಾಸಿಗಳೇ, ನಾನು ಸ್ವಾತಂತ್ರ್ಯ ದಿನದ ಈ ಪವಿತ್ರ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಇಂದು ದೇಶ, ಆತ್ಮ ವಿಶ್ವಾಸದೊಂದಿಗೆ ಬೀಗುತ್ತಿದೆ. ತನ್ನ ಕನಸುಗಳನ್ನು ನನಸು ಮಾಡುವ ಸಂಕಲ್ಪದೊಂದಿಗೆ ಕಠಿಣ ಪರಿಶ್ರಮದಿಂದ ದೇಶ ಹೊಸ ಎತ್ತರಕ್ಕೆ ಏರುತ್ತಿದೆ. ಇಂದಿನ ಸೂರ್ಯೋದಯ ಒಂದು ಹೊಸ ಹುರುಪು, ಹೊಸ ಉತ್ಸಾಹ, ಹೊಸ ಸ್ಫೂರ್ತಿ ಮತ್ತು ಹೊಸ ಚೈತನ್ಯವನ್ನು ತನ್ನೊಂದಿಗೆ ತಂದಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ದೇಶದಲ್ಲಿ 12 ವರ್ಷಗಳಿಗೆ ಒಮ್ಮೆ ಅರಳುವ ನೀಲ ಕುರಿಂಜಿ ಎಂಬ ಪುಷ್ಪ ಇದೆ. ಈ ವರ್ಷ ದಕ್ಷಿಣದ ನೀಲಗಿರಿ ಬೆಟ್ಟಗಳಲ್ಲಿ ಸ್ವಾತಂತ್ರ್ಯೋತ್ಸವದ ದಿನ ನೀಲ ಕುರಿಂಜಿ ಪುಷ್ಪ ತ್ರಿವರ್ಣ ಧ್ವಜದಲ್ಲಿನ ಅಶೋಕ ಚಕ್ರದಂತೆ ಸಂಪೂರ್ಣವಾಗಿ ಅರಳಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಮಣಿಪುರ, ತೆಲಂಗಾಣ, ಆಂಧ್ರ ಪ್ರದೇಶ ರಾಜ್ಯಗಳ ನಮ್ಮ ಹೆಣ್ಣು ಮಕ್ಕಳು ಸಪ್ತ ಸಮುದ್ರಗಳನ್ನು ಸುತ್ತಿ ಮರಳಿರುವ ಸಂದರ್ಭದಲ್ಲಿ ನಾವು ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೇವೆ. ಅವರು ಸಪ್ತ ಸಮುದ್ರಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿ, ಸಪ್ತ ಸಮುದ್ರ ನೀರಿಗೂ ತ್ರಿವರ್ಣಛಾಯೆ ಮೂಡಿಸಿದ್ದಾರೆ.
ನನ್ನ ಪ್ರೀತಿಯ ದೇಶವಾಸಿಗಳೇ, ಎವರೆಸ್ಟ್ ಶಿಖರವನ್ನು ಹಲವು ಬಾರಿ ಹತ್ತಿ ಗೆದ್ದ ಸಂದರ್ಭದಲ್ಲಿ ನಾವು ಸ್ವಾತಂತ್ರ್ಯದ ಸಂಭ್ರಮವನ್ನು ಆಚರಿಸುತ್ತಿದ್ದೇವೆ. ನಮ್ಮ ಅನೇಕ ಧೈರ್ಯವಂತರು, ಮತ್ತು ನಮ್ಮ ಹೆಣ್ಣು ಮಕ್ಕಳು ಆ ತುದಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಸ್ವಾತಂತ್ರ್ಯದ ಈ ದಿನದಂದು ನಾನು ದೂರದ ಗುಡ್ಡಗಾಡಿನಲ್ಲಿ ಜೀವನ ನಡೆಸುವ ನಮ್ಮ ಬುಡಕಟ್ಟು ಜನಾಂಗದ ಮಕ್ಕಳು ಎವರೆಸ್ಟ್ ಶಿಖರದ ಮೇಲೆ ಭಾರತದ ಧ್ವಜವನ್ನು ಹಾರಿಸಿ, ಅದರ ವೈಭವವನ್ನು ಮತ್ತಷ್ಟು ಹೆಚ್ಚಿಸಿರುವುದನ್ನು ನಾನು ಸ್ಮರಿಸಲಿಚ್ಛಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಲೋಕಸಭೆ ಮತ್ತು ರಾಜ್ಯಸಭೆಯ ಅಧಿವೇಶನ ಇತ್ತೀಚೆಗಷ್ಟೇ ಮುಗಿದಿವೆ. ಸದನದ ಕಲಾಪಗಳು ಬಹಳ ಸುವ್ಯವಸ್ಥಿತವಾಗಿ ನಡೆಸಿದ್ದನ್ನು ನೀವು ನೋಡಿರಬಹುದು. ಒಂದು ರೀತಿಯಲ್ಲಿ ಕಲಾಪ ಸಂಪೂರ್ಣವಾಗಿ ಸಾಮಾಜಿಕ ನ್ಯಾಯಕ್ಕೆ ಮುಡಿಪಾಗಿತ್ತು. ಅದು ದಲಿತರೇ ಇರಲಿ, ಶೋಷಿತರೇ ಇರಲಿ, ವಂಚಿತರೇ ಇರಲಿ ಅಥವಾ ಮಹಿಳೆಯರೇ ಆಗಿರಲಿ, ಸಮಾಜದ ದುರ್ಬಲ ವರ್ಗದವರ ಹಿತವನ್ನು ರಕ್ಷಿಸುವ ನಿಟ್ಟಿನಲ್ಲಿ ನಮ್ಮ ಸಂಸತ್ತು ಅತ್ಯಂತ ಸೂಕ್ಷ್ಮಸಂವೇದಿಯಾಗಿ ಮತ್ತು ಜಾಗೃತವಾಗಿ ಸಾಮಾಜಿಕ ನ್ಯಾಯಕ್ಕೆ ಇನ್ನಷ್ಟು ಬಲ ನೀಡಿದೆ.
ಓಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಈ ಬಾರಿ ನಮ್ಮ ಸಂಸತ್ತು ಈ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಿದೆ. ಹೀಗೆ ಮಾಡುವ ಮೂಲಕ ಹಿಂದುಳಿದವರು ಮತ್ತು ಅತಿ ಹಿಂದುಳಿದವರ ಹಿತ ಕಾಯುವ ಪ್ರಯತ್ನ ಮಾಡಿದೆ.
ಸುದ್ದಿ, ವರದಿಗಳು ದೇಶದಲ್ಲಿ ಹೊಸ ಚೈತನ್ಯವನ್ನು ತಂದಿರುವ ಸಂದರ್ಭದಲ್ಲಿ ನಾವು ಸ್ವಾತಂತ್ಯ್ರದ ಹಬ್ಬವನ್ನು ಆಚರಿಸುತ್ತಿದ್ದೇವೆ. ಭಾರತ ವಿಶ್ವದ 6ನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿದೆ ಎಂಬುದನ್ನು ವಿಶ್ವದ ಮೂಲೆ ಮೂಲೆಯಲ್ಲಿರುವ ಎಲ್ಲ ಭಾರತೀಯರೂ ಹೆಮ್ಮೆ ಪಡುತ್ತಿದ್ದಾರೆ. ಇಂಥ ಧನಾತ್ಮಕ ಸರಣಿ ಸನ್ನಿವೇಶಗಳ ಪೂರಕ ವಾತಾವರಣದಲ್ಲಿ ನಾವು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದೇವೆ.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಪೂಜ್ಯ ಬಾಪು ಅವರ ನೇತೃತ್ವದಲ್ಲಿ, ಲಕ್ಷಾಂತರ ಜನರು ತಮ್ಮ ಜೀವವನ್ನೇ ತ್ಯಾಗ ಮಾಡಿದರು, ತಮ್ಮ ಯೌವನವನ್ನು ಕಾರಾಗೃಹಗಳಲ್ಲಿ ಕಳೆದರು. ಹಲವು ಕ್ರಾಂತಿಕಾರಿಗಳು ಧೈರ್ಯವಾಗಿ ನೇಣುಗಂಬಕ್ಕೇರಿದರು. ಇಂದು ನಾನು ದೇಶವಾಸಿಗಳ ಪರವಾಗಿ ಸ್ವ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಯೋಧರಿಗೆ ಹೃದಯಾಂತರಾಳದಿಂದ ನಮಿಸುತ್ತೇನೆ. ಜೀವನ ಮತ್ತು ಮರಣದ ಮೂಲಕ ನಮ್ಮ ಕೈಗಳನ್ನು ಮೇಲೆ ಎತ್ತಿ ಹಿಡಿಯಲು ಸ್ಫೂರ್ತಿ ನೀಡುವ ನಮ್ಮ ತ್ರಿವರ್ಣ ಧ್ವಜದ ಗೌರವವನ್ನು ಎತ್ತಿ ಹಿಡಿಯಲು ನಮ್ಮ ಸೈನಿಕರು, ಅರೆ ಮಿಲಿಟರಿ ಪಡೆಗಳು ತಮ್ಮ ಜೀವವನ್ನೇ ತೆತ್ತಿದ್ದಾರೆ. ನಮ್ಮ ಪೊಲೀಸ್ ಪಡೆಗಳು ಜನರಿಗೆ ಭದ್ರತೆ ಮತ್ತು ಸುರಕ್ಷತೆ ನೀಡಲು ಹಗಲಿರುಳು ದುಡಿಯುತ್ತಿವೆ.
ಕೆಂಪು ಕೋಟೆಯ ಈ ವೇದಿಕೆಯಿಂದ ನಾನು ತ್ರಿವರ್ಣ ಧ್ವಜದ ಸಾಕ್ಷಿಯಾಗಿ, ಸೇನೆಯ ಎಲ್ಲ ಯೋಧರಿಗೆ, ಅರೆಸೇನಾಪಡೆಗಳಿಗೆ, ಪೋಲಿಸರಿಗೆ, ಅವರ ಸಮರ್ಪಣಾ ಸೇವೆಗಾಗಿ,ಅವರ ಶೌರ್ಯಕ್ಕಾಗಿ, ಕಠಿಣ ಪರಿಶ್ರಮಕ್ಕಾಗಿ ನಮನಗಳನ್ನು ಸಲ್ಲಿಸುತ್ತೇನೆ. ಸದಾ ಅವರ ಜೊತೆಗೆ ನನ್ನ ಶುಭಾಕಾಂಕ್ಷೆಗಳು ಇರುತ್ತದೆ.
ನಾವು ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧ ಭಾಗಗಳಿಂದ ಉತ್ತಮ ಮಳೆಯಾಗಿರುವ ಮತ್ತು ಪ್ರವಾಹದ ಸುದ್ದಿಗಳನ್ನು ಪಡೆಯುತ್ತಿದ್ದೇವೆ. ಪ್ರವಾಹದಿಂದಾಗಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿರುವವರಿಗೆ ಮತ್ತು ಸಂಕಷ್ಟದಲ್ಲಿರುವವರಿಗೆ ಈ ಸಂಕಷ್ಟದ ಸಂದರ್ಭದಲ್ಲಿ ದೇಶ ನಿಮ್ಮೊಂದಿಗಿದೆ ಮತ್ತು ನೀವು ಈ ಸಂಕಷ್ಟದಿಂದ ಹೊರಬರಲು ಸಂಪೂರ್ಣ ನೆರವಾಗುತ್ತದೆ ಎಂಬ ಭರವಸೆಯನ್ನು ನೀಡುತ್ತೇನೆ. ಈ ಪ್ರಕೃತಿ ವಿಕೋಪದಲ್ಲಿ ತಮ್ಮ ಆಪ್ತೇಷ್ಟರನ್ನು ಕಳೆದುಕೊಂಡವರ ನೋವನ್ನು ನಾನು ಹಂಚಿಕೊಳ್ಳುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಮುಂದಿನ ವರ್ಷ ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ 1೦೦ ವರ್ಷಗಳು ತುಂಬುತ್ತವೆ. ದೌರ್ಜನ್ಯ ಮೇರೆ ಮೀರಿದ್ದ ಸಂದರ್ಭದಲ್ಲಿ ನಮ್ಮ ದೇಶದ ಸಮುದಾಯ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದೆ. ಜಲಿಯನ್ ವಾಲಾಬಾಗ್ ಹತ್ಯಾಕಾಂಡವು ನಮ್ಮ ಧೈರ್ಯಶಾಲಿ ವ್ಯಕ್ತಿಗಳು ಮಾಡಿರುವ ತ್ಯಾಗವನ್ನು ನೆನಪಿಸುತ್ತದೆ ಮತ್ತು ನಮಗೆ ಸ್ಫೂರ್ತಿ ನೀಡುತ್ತವೆ. ನಾನು ಆ ಎಲ್ಲ ವೀರರಿಗೂ ಹೃದಯಾಂತರಾಳದಿಂದ ನಮಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಸ್ವಾತಂತ್ರ್ಯ ಕಷ್ಟದಿಂದ ದೊರೆತಿದೆ. ಪೂಜ್ಯ ಬಾಪೂ ಮತ್ತು ಕ್ರಾಂತಿಕಾರಿಗಳ ನೇತೃತ್ವದಲ್ಲಿ ಬಹಳಷ್ಟು ಮಹಾಪುರುಷರು,ಸತ್ಯಾಗ್ರಹಿಗಳು, ಧೈರ್ಯಶಾಲಿಗಳು, ಮಹಿಳೆಯರು ಮತ್ತು ಯುವಕರು ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಿದ್ದರು. ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅವರು ಕಾರಾವಾಸ ಶಿಕ್ಷೆಗೆ ಒಳಗಾಗಿ, ತಮ್ಮ ಅಮೂಲ್ಯವಾದ ಯೌವನವನ್ನು ಅಲ್ಲಿ ಕಳೆದರು. ಈ ಎಲ್ಲ ಸಂಕಷ್ಟಗಳ ನಡುವೆಯೂ ಅವರು ಭವ್ಯ ಭಾರತದ ಕನಸನ್ನು ಪೋಷಿಸಿಕೊಂಡು ಬಂದಿದ್ದರು.
ಹಲವು ವರ್ಷಗಳ ಹಿಂದೆ ತಮಿಳುನಾಡಿನ ರಾಷ್ಟ್ರ ಕವಿ, ಸುಬ್ರಮಣಿಯಂ ಭಾರತಿ ಅವರು ಈ ದೇಶದ ಮುನ್ನೋಟವನ್ನು ತಮ್ಮ ಪದಗಳಲ್ಲಿ ಮೂಡಿಸಿದ್ದರು.
ಎಲ್ಲಾರೂಮ್ ಅಮರನಿಲ್ಲಯ್ ಆಯೇಡುಮಾನಾನ್
ಮುರಯೈ ಇಂಡಿಯಾ ಉಳಗಿರಕ್ಕು ಅಲಿಕ್ಕುಂ
ಅವರು ಸ್ವಾತಂತ್ರ್ಯಾನಂತರ ಎಂಥ ಅದ್ಭುತ ಕನಸು ಕಟ್ಟಿಕೊಂಡಿದ್ದರು. ಸುಬ್ರಮಣಿಯನ್ ಭಾರತಿ ಅವರು ಭಾರತವು ಇಡೀ ವಿಶ್ವಕ್ಕೆ ಎಲ್ಲ ಬಗೆಯ ಸಂಕೋಲೆಯಿಂದ ಮುಕ್ತವಾಗುವುದು ಹೇಗೆ ಎಂಬ ದಾರಿ ತೋರಿದೆ ಎಂದು ಹೇಳಿದ್ದಾರೆ.
ನನ್ನ ಪ್ರೀತಿಯ ದೇಶವಾಸಿಗಳೇ, ಅಂಥ ಮಹಾಪುರುಷರ ಕನಸುಗಳನ್ನು ನನಸು ಮಾಡಲು, ಸ್ವಾತಂತ್ರ್ಯ ಯೋಧರ ಆಕಾಂಕ್ಷೆಗಳನ್ನು ಈಡೇರಿಸಲು, ದೇಶದ ಕೋಟ್ಯಂತರ ಜನರ ಆಸೆ ಆಕಾಂಕ್ಷೆಗಳನ್ನು ಪೂರೈಸಲು, ಸ್ವಾತಂತ್ರ್ಯಾ ನಂತರ ಪೂಜ್ಯ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಭಾರತ ಒಂದು ಸಮಗ್ರ ಸಂವಿಧಾನ ರಚನೆ ಮಾಡಿತು. ಈ ಸಮಗ್ರ ಸಂವಿಧಾನ ಒಂದು ನವ ಭಾರತ ನಿರ್ಮಾಣದ ಸಂಕಲ್ಪಕ್ಕೆ ಮುನ್ಸೂಚನೆಯಾಗಿತ್ತು. ಅದು ನಮಗಾಗಿ ಕೆಲವೊಂದು ಜವಾಬ್ದಾರಿಗಳನ್ನು ಹೊತ್ತು ತಂದಿತು ಮತ್ತು ನಮಗಾಗಿ ಕೆಲವು ಮಿತಿಗಳನ್ನೂ ನಿರ್ಧರಿಸಿತು. ನಮ್ಮ ಕನಸುಗಳನ್ನು ಪೂರೈಸಲು, ಸಮಾಜದ ಎಲ್ಲ ವರ್ಗ, ಸಮುದಾಯಗಳು ಮತ್ತು ಭಾರತದ ಪ್ರತಿಯೊಂದು ಭೂಭಾಗವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಮಾನ ಅವಕಾಶಗಳು ಸಿಗಲಿ ಎನ್ನುವುದಕ್ಕೆ ನಮ್ಮ ಸಂವಿಧಾನ ನಮಗೆ ಮಾರ್ಗದರ್ಶನ ನೀಡುತ್ತಿದೆ.
ನನ್ನ ಪ್ರಿಯ ಸೋದರ ಸೋದರಿಯರೇ,
ಭಾರತದ ತ್ರಿವರ್ಣ ಧ್ವಜದಿಂದ ಹೇಗೆ ಪ್ರೇರಣೆ ಪಡೆಯಬೇಕು ಎಂಬ ಬಗ್ಗೆ ನಮ್ಮ ಸಂವಿಧಾನ ಹೀಗೆ ಹೇಳುತ್ತದೆ.ನಾವು ಬಡವರಿಗೆ ನ್ಯಾಯ ಖಾತ್ರಿ ಪಡಿಸಬೇಕು, ಮುಂದೆ ಸಾಗಲು ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಬೇಕು, ನಮ್ಮ ಕೆಳ ಮಧ್ಯಮ ವರ್ಗ, ಮಧ್ಯಮ ವರ್ಗ ಮತ್ತು ಮೇಲ್ಮಧ್ಯಮ ವರ್ಗದವರು ಅಭಿವೃದ್ಧಿಗೆ ಯಾವುದೇ ರೀತಿಯ ಅಡೆತಡೆಗಳು ಬರಬಾರದು, ಸರ್ಕಾರವೂ ಈ ಹಾದಿಗೆ ಅಡ್ಡವಾಗಬಾರದು, ಸಾಮಾಜಿಕ ವ್ಯವಸ್ಥೆ ಅವರ ಕನಸುಗಳು ಕಮರುವಂತೆ ಮಾಡಬಾರದು. ಅವರು ಬೆಳೆಯಲು ಮತ್ತು ಬೆಳಗಲು ಗರಿಷ್ಠ ಅವಕಾಶಗಳು ದೊರೆಯುವಂತಹ ಮತ್ತು ಅವರು ಯಾವುದೇ ಮಿತಿ ಇಲ್ಲದೆ ಸಾಗಲು ಅವಕಾಶ ನೀಡುವ ವಾತಾವರಣವನ್ನು ನಾವು ನಿರ್ಮಾಣ ಮಾಡಬೇಕಾಗಿದೆ.
ನಮ್ಮ ಹಿರಿಯರಾಗಿರಲಿ, ದಿವ್ಯಾಂಗದವರಾಗಿರಲಿ, ಮಹಿಳೆಯರಾಗಿರಲಿ, ದಲಿತರು, ವಂಚಿತರು, ಶೋಷಿತರಾಗಿರಲಿ, ಕಾಡಿನಲ್ಲಿ ಜೀವನ ಸಾಗಿಸುವ ಬುಡಕಟ್ಟು ಸೋದರ ಸೋದರಿಯರಾಗಿರಲಿ ಪ್ರತಿಯೊಬ್ಬರಿಗೂ ಅವರ ವಿಶ್ವಾಸ ಮತ್ತು ಆಕಾಂಕ್ಷೆಗಳಿಗನುಗುಣವಾಗಿ ಬೆಳೆಯಲು ಅವಕಾಶಗಳು ದೊರಕಬೇಕು. ನಾವು ಸ್ವಾವಲಂಬಿ ಮತ್ತು ಸ್ವಸಾಮರ್ಥ್ಯದ ಭಾರತ ನಮ್ಮದಾಗಲಿ, ಅಭಿವೃದ್ಧಿ ನಿರಂತರ ಹಾದಿಯನ್ನು ಕಂಡುಕೊಳ್ಳುವಂಥ, ನಿರಂತರವಾಗಿ ಪ್ರಗತಿಯನ್ನು ಸಾಧಿಸುವಂಥ ಭಾರತವಾಗಲಿ, ವಿಶ್ವದಲ್ಲಿ ಭಾರತದ ಹೆಸರು ರಾರಾಜಿಸಲಿ ಎಂದು ಆಶಿಸುತ್ತೇವೆ. ಅಷ್ಟೇ ಅಲ್ಲ ವಿಶ್ವದಲ್ಲಿ ಭಾರತದ ಹೆಸರು ಪ್ರಜ್ವಲಿಸಲಿ ಎಂದು ಬಯಸುತ್ತೇವೆ. ನಾವು ಇಂಥ ಭಾರತದ ನಿರ್ಮಾಣ ಮಾಡಲು ಬಯಸುತ್ತೇವೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಾನು ಈ ಹಿಂದೆ ಸಹ ಟೀಮ್ ಇಂಡಿಯಾದ ನನ್ನ ದೃಷ್ಟಿಕೋನವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ, 125 ಕೋಟಿ ಭಾರತೀಯರೂ ಪಾಲುದಾರರಾದ ಮೇಲೆ, ಪ್ರತಿಯೊಬ್ಬ ಪ್ರಜೆಯೂ ದೇಶದ ಅಭಿವೃದ್ಧಿಗೆ ನಮ್ಮೊಂದಿಗೆ ಸೇರುತ್ತಾರೆ, 125 ಕೋಟಿ ಕನಸುಗಳು, 125 ಕೋಟಿ ಸಂಕಲ್ಪಗಳು, 125 ಕೋಟಿ ಪ್ರಯತ್ನಗಳು ಗುರಿ ಸಾಧನೆಗಾಗಿ ಸರಿಯಾದ ದಿಕ್ಕಿನಲ್ಲಿ ಸಾಗಿದರೆ, ಯಾವುದೂ ಅಸಾಧ್ಯವೇನಲ್ಲ.
ನನ್ನ ಪ್ರಿಯ ಸೋದರ ಸೋದರಿಯರೇ, 2014 ರಲ್ಲಿ ಈ ದೇಶದ 125 ಕೋಟಿ ಜನರು ಸರ್ಕಾರ ರಚನೆಗೆ ಮತ ನೀಡಿ ಸುಮ್ಮನಿರಲಿಲ್ಲ, ದೇಶ ಕಟ್ಟುವ ಕಾರ್ಯದಲ್ಲಿ ಕೈಜೋಡಿಸಿದರು, ಇಂದಿಗೂ ಜೊತೆಗಿದ್ದಾರೆ ಮುಂದೆಯೂ ಇರುತ್ತಾರೆ ಎಂದು ನಾನು ವಿನಮ್ರತೆಯಿಂದ ಗೌರವ ಪೂರ್ವಕವಾಗಿ ಹೇಳಬಯಸುತ್ತೇನೆ. 125 ಕೋಟಿ ದೇಶದ ಜನತೆ, ಭಾರತದ 6 ಲಕ್ಷಕ್ಕಿಂತ ಹೆಚ್ಚು ಗ್ರಾಮಗಳು, ಇದೇ ನಮ್ಮ ದೇಶದ ಶಕ್ತಿಯಾಗಿದೆ. ಇಂದುನಾವು ಶ್ರೀ ಅರವಿಂದರ ಜನ್ಮ ಜಯಂತಿ ಆಚರಿಸುತ್ತಿದ್ದೇವೆ. ಅವರು ಅದ್ಭುತವಾದ ಮಾತನ್ನು ಹೇಳಿದ್ದರು. ’ರಾಷ್ಟ್ರವೆಂದರೇನು, ನಮ್ಮ ಮಾತೃಭೂಮಿ ಎಂದರೇನು? ಇದು ಕೇವಲ ಒಂದು ಭೂಮಿಯ ತುಂಡಲ್ಲ, ಇದು ಕೇವಲ ಭಾವನೆಯಲ್ಲ, ಇದು ಕೇವಲ ಒಂದು ಆಧಾರ ರಹಿತ ಕಲ್ಪನೆಯಲ್ಲ, ರಾಷ್ಟ್ರವೆಂಬುದು ಒಂದು ಬೃಹತ್ ಶಕ್ತಿ, ಅದು ಬಹಳಷ್ಟು ಚಿಕ್ಕ ಪುಟ್ಟ ಶಕ್ತಿಗಳನ್ನು ಒಗ್ಗೂಡಿಸಿದ ಪ್ರಜ್ವಲಿಸುವ ಮೂರ್ತರೂಪವಾಗಿದೆ ಎಂದಿದ್ದರು. ಶ್ರೀ ಅರವಿಂದರ ಈ ಕಲ್ಪನೆಯೇ ಇಂದು ದೇಶದ ಪ್ರತಿ ನಾಗರಿಕನಿಗೂ ದೇಶವನ್ನು ಮುನ್ನಡೆಸಲು ಪ್ರೇರಣೆಯಾಗಿದೆ. ನಾವು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದ್ದೇವೆ ಆದರೆ ನಾವು ಎಲ್ಲಿಂದ ಮುನ್ನಡೆದೆವು, ಎಲ್ಲಿಂದ ಯಾತ್ರೆಯನ್ನು ಆರಂಭಿಸಿದ್ದೆವು ಎಂದು ಹಿಂದಿರುಗಿ ನೋಡದಿದ್ದರೆ ಎಲ್ಲಿಗೆ ತಲುಪಿದ್ದೇವೆ ಎಷ್ಟು ದೂರ ಕ್ರಮಿಸಿದ್ದೇವೆ ಎಂಬುದು ನಮ್ಮ ಅರಿವಿಗೆ ಬರುವುದಿಲ್ಲ. ಈ ಕಾರಣಕ್ಕಾಗಿಯೇ 2013ನ್ನು ನಾವು ಆಧಾರವರ್ಷ ಎಂದು ಪರಿಗಣಿಸಿದರೆ, ಅದನ್ನು ಪರಿಗಣನೆಗೆ ತೆಗೆದುಕೊಂಡರೆ, ಕಳೆದ ನಾಲ್ಕು ವರ್ಷಗಳಲ್ಲಿ ದೇಶ ಸಾಗಿರುವ ವೇಗ ಸಾಧಿಸಿರುವ ಪ್ರಗತಿ ನೋಡಿ ನೀವು ಅಚ್ಚರಿ ಪಡುತ್ತೀರಿ. ಶೌಚಾಲಯಗಳ ಉದಾಹರಣೆಯನ್ನೇ ತೆಗೆದುಕೊಳ್ಳಿ, ನಾವು 2013ರಲ್ಲಿದ್ದ ವೇಗದಲ್ಲಿಯೇ ಶೌಚಾಲಯ ನಿರ್ಮಾಣ ಮಾಡುತ್ತಿದ್ದರೆ, ಶೇ.100ರ ಗುರಿ ಸಾಧನೆಗೆ ದಶಕಗಳೇ ಬೇಕಾಗುತ್ತಿತ್ತು.
ನಾವು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವಿಷಯ ತೆಗೆದುಕೊಂಡರೆ 2013 ರ ವೇಗದಲ್ಲಿ ಸಾಗಿದ್ದರೆ, ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬಹುಶಃ ಇನ್ನೊಂದೆರಡು ದಶಕಗಳೇ ಬೇಕಾಗುತ್ತಿತ್ತು. ನಾವು 2013ರ ವೇಗದಲ್ಲಿ ನೋಡಿದರೆ, ಬಡ ತಾಯಂದಿರಿಗೆ ಹೊಗೆ ಮುಕ್ತ ಎಲ್ ಪಿ ಜಿ ಅನಿಲ ಸಂಪರ್ಕವನ್ನು ತಲುಪಿಸಲು, ಬಹುಶಃ ನೂರು ವರ್ಷಗಳು ಕಡಿಮೆಯೆನಿಸುತ್ತಿತ್ತೇನೋ. ನಾವು 2013ರ ವೇಗದಲ್ಲಿ ಆಪ್ಟಿಕಲ್ ಫೈಬರ್ ಹಾಕುವ ಕೆಲಸವನ್ನು ಮಾಡಿದ್ದರೆ, ಆಪ್ಟಿಕಲ್ ಫೈಬರ್ ಭಾರತದ ಗ್ರಾಮಗಳನ್ನು ತಲುಪುವಲ್ಲಿ ಒಂದು ಪೀಳಿಗೆಯೇ ಉರುಳಿ ಹೋಗುತ್ತಿತ್ತು. ನಾವು ಅಭಿವೃದ್ಧಿಯ ಈ ವೇಗವನ್ನು ಮುಂದುವರಿಸಿಕೊಂಡು ಹೋಗಲು ಶ್ರಮಿಸುತ್ತೇವೆ.
ಸೋದರ ಸೋದರಿಯರೇ, ದೇಶದ ಆಕಾಂಕ್ಷೆಗಳು ಬಹಳಷ್ಟಿವೆ, ದೇಶದ ಅವಶ್ಯಕತೆಗಳೂ ಸಾಕಷ್ಟಿವೆ, ಅವನ್ನು ಪೂರ್ಣಗೊಳಿಸಲು, ಸಮಾಜ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಒಗ್ಗೂಡಿ ಸ್ಥಿರ ಮತ್ತು ನಿರಂತರವಾಗಿ ಶ್ರಮಿಸುವ ಅವಶ್ಯಕತೆಯಾಗಿದೆ.
ಅದೇ ದೇಶ, ಅದೇ ಭೂಮಿ, ಅದೇ ವಾತಾವರಣ, ಅದೇ ಆಕಾಶ, ಅದೇ ಸಮುದ್ರ, ಅದೇ ಸರ್ಕಾರಿ ಕಚೇರಿಗಳು. ಅದೇ ಕಡತಗಳು, ಸರ್ಕಾರಿ ಕೆಲಸ ಮಾಡುವ ಜನರೂ ಅವರೇ ಆಗಿದ್ದರೂ ಇಂದು ದೇಶದಲ್ಲಿ ಬಹಳಷ್ಟು ಬದಲಾವಣೆಗಳಾಗಿರುವುದನ್ನು ನಾವು ಕಾಣಬಹುದು. ಈ ನಾಲ್ಕು ವರ್ಷಗಳಲ್ಲಿ ದೇಶ ಬದಲಾವಣೆಯನ್ನು ಕಾಣುತ್ತಿದೆ. ದೇಶ ಒಂದು ಹೊಸ ಚೈತನ್ಯ, ಹೊಸ ಹುರುಪು, ಹೊಸ ಸಂಕಲ್ಪ, ಹೊಸ ಸಾಧನೆಯೊಂದಿಗೆ ಮುಂದುವರಿಯುತ್ತಿದೆ. ಆದ್ದರಿಂದಲೇ ಇಂದು ದೇಶದಲ್ಲಿ ದುಪ್ಪಟ್ಟು ಹೆದ್ದಾರಿಗಳ ನಿರ್ಮಾಣವಾಗಿದೆ,ಹಳ್ಳಿಗಳಲ್ಲಿ ನಾಲ್ಕು ಪಟ್ಟು ಹೆಚ್ಚು ಮನೆಗಳನ್ನು ನಿರ್ಮಿಸಲಾಗುತ್ತಿದೆ, ಇಂದು ದೇಶ ದಾಖಲೆ ಪ್ರಮಾಣದ ಧಾನ್ಯ ಉತ್ಪಾದನೆಯನ್ನು ಮಾಡುತ್ತಿದೆ. ಅದೇ ರೀತಿ ದಾಖಲೆ ಸಂಖ್ಯೆಯ ಮೊಬೈಲ್ ಫೋನ್ ಉತ್ಪಾದನೆಯನ್ನೂ ಮಾಡುತ್ತಿದೆ. ಇಂದು ದೇಶದಲ್ಲಿ ದಾಖಲೆ ಪ್ರಮಾಣದ ಟ್ರ್ಯಾಕ್ಟರ್ ಮಾರಾಟವಾಗುತ್ತಿದೆ. ಒಂದೆಡೆ ಗ್ರಾಮದ ಕೃಷಿಕರು ಇಂದು ದಾಖಲೆ ಪ್ರಮಾಣದ ಟ್ರ್ಯಾಕ್ಟರ್‌ಗಳನ್ನು ಖರೀದಿಸುತ್ತಿದ್ದಾರೆ. ಅದೇ ವೇಳೆ ದೇಶದಲ್ಲಿ ಸ್ವಾತಂತ್ರ್ಯಾ ನಂತರ ಅತಿ ಹೆಚ್ಚು ವಿಮಾನಗಳನ್ನು ಖರೀದಿ ಮಾಡಲಾಗುತ್ತಿದೆ. ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಹೊಸ ಐಐಎಂಗಳು, ಐಐಟಿಗಳು, ಏಮ್ಸ್ ಗಳ ಸ್ಥಾಪನೆ ಮಾಡಲಾಗುತ್ತಿದೆ. ಇಂದು ದೇಶ ಸಣ್ಣ ಪುಟ್ಟ ಸ್ಥಳಗಳಲ್ಲಿ ಕೇಂದ್ರ ತೆರೆದು ಕೌಶಲ್ಯಾಭಿವೃದ್ಧಿ ಅಭಿಯಾನಕ್ಕೆ ಹೊಸ ಚೈತನ್ಯ ನೀಡುತ್ತಿದೆ. ಅದೇ ವೇಳೆ 2ನೇ ಹಂತ ಮತ್ತು 3ನೇ ಹಂತದ ನಗರಗಳಲ್ಲಿ ನವೋದ್ಯಮಗಳ ಮಹಾಪೂರವೆ ಇದ್ದು, ನವ ಚೈತನ್ಯ ತರುತ್ತಿವೆ.
ಸೋದರ ಸೋದರಿಯರೇ, ಡಿಜಿಟಲ್ ಇಂಡಿಯಾ ಇಂದು ಪ್ರತಿ ಗ್ರಾಮದಲ್ಲೂ ಹೊಸ ಮಾರ್ಗ ತೋರುತ್ತಿದೆ. ಒಂದೆಡೆ ಡಿಜಿಟಲ್ ಇಂಡಿಯಾಗಾಗಿ ಕೆಲಸ ನಡೆಯುತ್ತಿದ್ದರೆ ಇನ್ನೊಂದೆಡೆ ನನ್ನ ದಿವ್ಯಾಂಗ ಸೋದರ ಸೋದರಿಯರಿಗಾಗಿ ಕಾಮನ್ ಸೈನ್ ಗಳ ಶಬ್ದಕೋಶ ನಿರ್ಮಾಣದ ಸಿದ್ಧತೆಯೂ ಅಷ್ಟೇ ಶ್ರದ್ಧೆಯಿಂದ ನಡೆಯುತ್ತಿದೆ. ಒಂದೆಡೆ ನಮ್ಮ ದೇಶದ ರೈತರು ಆಧುನಿಕ ಕೃಷಿ ತಂತ್ರಗಳಾದ ಹನಿ ನೀರಾವರಿ, ಸೂಕ್ಷ್ಮ ನೀರಾವರಿ, ತುಂತುರು ನೀರಾವರಿ ಬಳಸಲಾರಂಭಿಸಿದ್ದಾರೆ. ಇನ್ನೊಂದೆಡೆ ಮುಚ್ಚಲಾಗಿದ್ದ 99ದೊಡ್ಡ ನೀರಾವರಿ ಯೋಜನೆಗಳಿಗೆ ಪುನರ್ ಚಾಲನೆ ನೀಡಲಾಗಿದೆ. .
ಎಲ್ಲಿಯೇ ಪ್ರಕೃತಿ ವಿಕೋಪ ಎದುರಾಗಲಿ ನಮ್ಮ ದೇಶದ ಸೈನಿಕರು ಸಂತ್ರಸ್ತರ ನೆರವಿಗೆ ಧಾವಿಸುತ್ತಾರೆ. ನಮ್ಮ ಯೋಧರು ಸಂಕಷ್ಟದಲ್ಲಿರುವ ಜನರ ರಕ್ಷಣೆಗಾಗಿ ಅಸಾಧಾರಣ ಶೌರ್ಯ ಪ್ರದರ್ಶಿಸುತ್ತಿದ್ದಾರೆ. ಅದೇ ರೀತಿ ಸಂಕಲ್ಪದೊಂದಿಗೆ ಹೊರಟಾಗ ಸರ್ಜಿಕಲ್ ಸ್ಟ್ರೈಕ್ ನೊಂದಿಗೆ ಶತ್ರುಗಳಿಗೆ ಮಣ್ಣು ಮುಕ್ಕಿಸಿ ಹಿಂದಿರುಗುತ್ತಿದ್ದಾರೆ.
ನಮ್ಮ ದೇಶದ ಅಭಿವೃದ್ಧಿಯ ಚಿತ್ರಣದತ್ತೆ ಒಮ್ಮೆ ಕಣ್ಣು ಹಾಯಿಸಿ. ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ ಯಾರೇ ಆದರೂ ದೇಶದ ಅಭಿವೃದ್ಧಿಯನ್ನು ನೋಡುತ್ತಾರೆ ಅದು ಹೊಸ ಹುರುಪು ಮತ್ತು ಉತ್ಸಾಹದೊಂದಿಗೆ ಮುಂದೆ ಸಾಗಿದೆ. ನಾನು ಗುಜರಾತ್ ಮೂಲದವನು. ಗುಜರಾತಿಯಲ್ಲಿ ಒಂದು ಮಾತಿದೆ “ನಿಶಾನ್ ಚೂಕ್ ಮಾಫ್ ಲೇಕಿನ್ ನಹಿ ಮಾಫ್ ನೀಚಾ ನಿಶಾನ್’ ಇದರ ಅರ್ಥ ಗುರಿ ಮತ್ತು ಕನಸು ದೊಡ್ಡದಾಗಿರಬೇಕು, ಅದಕ್ಕಾಗಿ ಶ್ರಮಪಡಬೇಕಾಗುತ್ತದೆ, ಉತ್ತರ ನೀಡಬೇಕಾಗುತ್ತದೆ. ಆದರೆ ಗುರಿ ದೊಡ್ಡದಾಗಿರದಿದ್ದರೆ ದೂರ ದೃಷ್ಟಿ ಇಲ್ಲದಿದ್ದರೆ ನಿರ್ಧಾರಗಳೂ ಆಗದೆ ವಿಕಾಸ ಯಾತ್ರೆ ನಿಂತುಹೋಗುತ್ತದೆ. ಹೀಗಾಗಿಯೇ ನನ್ನ ಸೋದರ ಸೋದರಿಯರೇ ನಾವು ದೊಡ್ಡ ಗುರಿಯೊಂದಿಗೆ ಸಂಕಲ್ಪದೊಂದಿಗೆ ಮುಂದುವರಿಯುವತ್ತ ಪ್ರಯತ್ನ ಮಾಡಬೇಕಿದೆ. ಯಾವಾಗ ಗುರಿ ನಿರ್ದಿಷ್ಟವಾಗಿರುವುದಿಲ್ಲವೋ, ನಿರ್ಧಾರಗಳು ದಿಟ್ಟವಾದದ್ದಾಗಿರುವುದಿಲ್ಲವೋ ಆಗ ಸಾಮಾಜಿಕ ಜೀವನದ ಮಹತ್ವದ ನಿರ್ಧಾರಗಳೂ ವರ್ಷಗಟ್ಟಲೇ ತ್ರಿಶಂಕು ಸ್ಥಿತಿಯಲ್ಲಿ ಉಳಿದುಬಿಡುತ್ತವೆ. ಎಂ ಎಸ್ ಪಿ.ಯ ಉದಾಹರಣೆಯನ್ನೇ ತೆಗೆದುಕೊಳ್ಳಿ, ರೈತರು ಮಾಡುವ ಹೂಡಿಕೆಯ ಒಂದೂವರೆ ಪಟ್ಟು ಎಂ.ಎಸ್ ಪಿ, ಇರಬೇಕು ಎಂದು ದೇಶದ ಅರ್ಥ ಶಾಸ್ತ್ರಜ್ಞರು, ರೈತ ಸಂಘಟನೆಗಳು, ರೈತರು ಅಷ್ಟೇ ಅಲ್ಲ, ರಾಜಕೀಯ ಪಕ್ಷಗಳೂ ಒತ್ತಾಯಿಸುತ್ತಿದ್ದರು, ವರ್ಷಗಟ್ಟಲೆ ಇದರ ಬಗ್ಗೆ ಚರ್ಚೆ ನಡೆಯುತ್ತಿತ್ತು, ಕಡತಗಳು ಮುಂದೆ ಸಾಗುತ್ತಿದ್ದವು, ಸ್ಥಗಿತಗೊಳ್ಳುತ್ತಿದ್ದವು, ಮಧ್ಯದಲ್ಲೇ ಉಳಿದುಬಿಡುತ್ತಿದ್ದವು. ಆದರೆ ಅಂತಿಮವಾಗಿ ನಾವು ದಿಟ್ಟ ನಿರ್ಧಾರ ತೆಗೆದುಕೊಂಡೆವು. ಬಹಳ ಧೈರ್ಯದಿಂದ ನಮ್ಮ ಕೃಷಿಕರಿಗೆ ಬೇಸಾಯದ ವೆಚ್ಚದ ಒಂದೂವರೆ ಪಟ್ಟು ಗರಿಷ್ಠ ಬೆಂಬಲ ಬೆಲೆ ನೀಡಲೇಬೇಕು ಎಂದು ನಿರ್ಧರಿಸಿದೆವು. ಜಿಎಸ್.ಟಿ. ಬಗ್ಗೆ ಒಮ್ಮತವಿತ್ತು. ಪ್ರತಿಯೊಬ್ಬರೂ ಜಿಎಸ್ಟಿ ಬಯಸುತ್ತಿದ್ದರು. ಆದರೆ ನಿರ್ಣಯ ತೆಗೆದುಕೊಳ್ಳಲಾಗುತ್ತಿರಲಿಲ್ಲ. ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಹಿತಾಸಕ್ತಿಗಳು ಮತ್ತು ಚುನಾವಣೆಗಳ ಒತ್ತಡ ನಿರಂತರವಾಗಿತ್ತು. ಇಂದು ದೇಶದ ಚಿಕ್ಕ ಪುಟ್ಟ ವ್ಯಾಪಾರಿಗಳ ಸಹಾಯದಿಂದ ಅವರ ಮುಕ್ತ ಮನಸ್ಸಿನಿಂದಾಗಿ, ಹೊಸತನ್ನು ಸ್ವೀಕರಿಸುವ ಅವರ ಭಾವನೆಯಿಂದಾಗಿ ಇಂದು ದೇಶದಲ್ಲಿ ಜಿಎಸ್ ಟಿ ಜಾರಿಯಾಗಿದೆ. ವ್ಯಾಪಾರಿ ಸಮುದಾಯದಲ್ಲಿ ಹೊಸದೊಂದು ವಿಶ್ವಾಸ ಮೂಡಿದೆ. ಜಿಎಸ್ಟಿ ಅಳವಡಿಕೆಯಲ್ಲಿ ಸಣ್ಣ ವ್ಯಾಪಾರಸ್ಥರು ಸಮಸ್ಯೆ ಎದುರಿಸಿದರು, ಆದರೆ ಸವಾಲು ಸ್ವೀಕರಿಸಿದರು. ದೇಶ ಈಗ ಮುನ್ನಡೆಯುತ್ತಿದೆ.
ಇಂದು ನಮ್ಮ ದೇಶದ ಬ್ಯಾಂಕಿಂಗ್ ವಲಯವನ್ನು ಬಲಪಡಿಸಲು ನಾವು ದಿವಾಳಿ ಹಾಗೂ ದಿವಾಳಿತನದ ಕಾನೂನು ಮಾಡಿದ್ದೇವೆ. ಮೊದಲಿಗೆ ಇದಕ್ಕೆ ವಿರೋಧ ವ್ಯಕ್ತಪಡಿಸಿದವರು ಯಾರು? . ಅಂಥ ನಿರ್ಧಾರ ಕೈಗೊಳ್ಳುವುದಕ್ಕಾಗಿ ಒಂದು ದೃಢಸಂಕಲ್ಪ, ಸಾಮರ್ಥ್ಯ, ವಿಶ್ವಾಸ ಬೇಕಾಗುತ್ತದೆ. ಮತ್ತು ಜನರ ಒಳಿತಿಗಾಗಿ ಸಂಪೂರ್ಣ ಸಮರ್ಪಣಾ ಭಾವದ ಅವಶ್ಯಕತೆಯಿರುತ್ತದೆ. ಬೇನಾಮಿ ಆಸ್ತಿಯ ಕಾನೂನು ಈ ಹಿಂದೆ ಏಕೆ ಜಾರಿಯಾಗಲಿಲ್ಲ? ದೇಶಕ್ಕಾಗಿ ಏನನ್ನಾದರೂ ಮಾಡುವ ನಿರ್ಧಾರ ಗಟ್ಟಿಯಾಗಿದ್ದಲ್ಲಿ ಮಾತ್ರ ಬೇನಾಮಿ ಆಸ್ತಿಯಂಥ ಕಾನೂನು ಜಾರಿಯಾಗುತ್ತದೆ. ನಮ್ಮ ರಕ್ಷಣಾ ಪಡೆಯ ಯೋಧರು ಹಲವು ದಶಕಗಳಿಂದ ಒಂದು ಶ್ರೇಣಿ, ಒಂದೇ ಪಿಂಚಣಿಗಾಗಿ ಬೇಡಿಕೆ ಇಟ್ಟಿದ್ದರು. ಅವರು ಶಿಸ್ತುಬದ್ಧರಾದ್ದರಿಂದ ಚಳವಳಿಗೆ ಇಳಿದಿರಲಿಲ್ಲ. ಆದರೆ ಧ್ವನಿ ಎತ್ತಿದ್ದರು. ಆದರೆ ಯಾರೂ ನಿರ್ಧಾರ ಕೈಗೊಂಡಿರಲಿಲ್ಲ. ಈ ನಿಟ್ಟಿನಲ್ಲಿ ಯಾರಾದರೊಬ್ಬರು ನಿರ್ಧಾರ ತೆಗೆದುಕೊಳ್ಳಲೇಬೇಕಿತ್ತು. ನೀವು ನಮಗೆ ಆ ನಿರ್ಧಾರ ಕೈಗೊಳ್ಳುವ ಜವಾಬ್ದಾರಿಯನ್ನು ನೀಡಿದಿರಿ. ನಾವು ಅದನ್ನು ಧನಾತ್ಮಕವಾಗಿ ಪೂರ್ಣಗೊಳಿಸಿದೆವು.
ನನ್ನ ಪ್ರೀತಿಯ ಸೋದರ ಸೋದರಿಯರೇ,
ನಾವು ಪಕ್ಷದ ಹಿತಕ್ಕಾಗಿ ಕೆಲಸ ಮಾಡುವ ಜನರಲ್ಲ. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದೇವೆ ಏಕೆಂದರೆ ದೇಶ ಹಿತವೇ ನಮ್ಮ ಆದ್ಯತೆಯಾಗಿದೆ.
ನನ್ನ ಪ್ರೀತಿಯ ಸೋದರ ಸೋದರಿಯರೇ,
ಜಾಗತಿಕ ಅರ್ಥವ್ಯವಸ್ಥೆಯ ಯುಗದಲ್ಲಿ ಇಡೀ ವಿಶ್ವವೇ ಭಾರತದಲ್ಲಿ ಆಗುತ್ತಿರುವ ಪ್ರತಿಯೊಂದು ಬೆಳವಣಿಗೆಯನ್ನು ಗಮನಿಸುತ್ತಿದೆ –ದೊಡ್ಡದೋ ಅಥವಾ ಸಣ್ಣದೋ ಆಳವಾದ ಆಸಕ್ತಿ ಮತ್ತು ವಿಶ್ವಾಸ ಹಾಗೂ ನಿರೀಕ್ಷೆಯೊಂದಿಗೆ ನೋಡುತ್ತಿದೆ. 2014ಕ್ಕಿಂತ ಮೊದಲು ವಿಶ್ವದ ಅಗ್ರಗಣ್ಯ ಸಂಸ್ಥೆಗಳು, ವಿಶ್ವದ ಅಗ್ರಗಣ್ಯ ಅರ್ಥಶಾಸ್ತ್ರಜ್ಞರು, ವಿಷಯ ತಜ್ಞರು ಏನು ಹೇಳಿದ್ದರು ನೆನಪಿಸಿಕೊಳ್ಳಿ, ಭಾರತದ ಅರ್ಥವ್ಯವಸ್ಥೆ ಬಹಳ ಕಳವಳಕಾರಿಯಾಗಿದೆ ಎಂದು ತಜ್ಞರು ಹೇಳುತ್ತಿದ್ದರು. ಆದರೆ ಇಂದು ಅವರೇ ಅದೇ ಸಂಸ್ಥೆಗಳು ಭಾರತದ ಸುಧಾರಣೆಗಳು ಆರ್ಥಿಕ ಮೂಲಗಳಿಗೆ ಶಕ್ತಿಯನ್ನು ತುಂಬುತ್ತಿವೆ ಎಂದು ಬಹಳ ವಿಶ್ವಾಸದಿಂದ ಹೇಳುತ್ತಿದ್ದಾರೆ. ಕಾಲ ಬದಲಾಗಿದೆ. . ಒಂದು ಕಾಲದಲ್ಲಿ ಜಗತ್ತು ರೆಡ್ ಟೇಪ್ ಬಗ್ಗೆ ಮಾತಾಡುತ್ತಿತ್ತು. ಆದರೆ ಇಂದು ರತ್ನಗಂಬಳಿಯ ಮಾತು ಕೇಳಿ ಬರುತ್ತಿದೆ. ಸುಗಮ ವ್ಯಾಪಾರದ ಶ್ರೇಣೀಕರಣದಲ್ಲಿ ನಾವು ನೂರನೇ ಸ್ಥಾನಕ್ಕೆ ತಲುಪಿದ್ದೇವೆ. ಇಂದು ವಿಶ್ವ ಈ ಸಾಧನೆಯನ್ನು ಬಹಳ ಹೆಮ್ಮೆಯಿಂದ ನೋಡುತ್ತಿದೆ. ಒಂದು ಕಾಲವಿತ್ತು, ಭಾರತ ಎಂದರೆ ಪಾರ್ಶ್ವವಾಯು ಪೀಡಿತ ಯೋಜನೆಗಳು ಮತ್ತು ವಿಳಂಬ ಸುಧಾರಣೆ ಎನ್ನಲಾಗುತ್ತಿತ್ತು. ಹಳೆಯ ವೃತ್ತ ಪತ್ರಿಕೆಗಳು ಇದನ್ನು ಸಾಬೀತು ಪಡಿಸುತ್ತವೆ. ಆದಾಗ್ಯೂ ಇಂದು, ಇಂದು ವಿಶ್ವದಾದ್ಯಂತದಿಂದ ಒಂದೇ ಮಾತು ಕೇಳಿಬರುತ್ತಿದೆ, ರಿಫಾರ್ಮ್ ಪರ್ಫಾರ್ಮ್,ಟ್ರಾನ್ಸ್ ಫಾರ್ಮ್ ಅಂದರೆ ಸುಧಾರಣೆ, ಕಾರ್ಯಾಚರಣೆ, ಪರಿವರ್ತನೆ. ಒಂದರ ನಂತರ ಒಂದು ನೀತಿಯನ್ನು ಜಾರಿ, ಸಮಯಕ್ಕೆ ತಕ್ಕ ನಿರ್ಣಯದಿಂದ ಇದು ಸಾಧ್ಯವಾಗಿದೆ. ಒಂದು ಕಾಲದಲ್ಲಿ ವಿಶ್ವ ಭಾರತವನ್ನು ಕುಸಿತದ ಅಂಚಿಗೆ ತಲುಪಿದ - ಫ್ರೆಜೈಲ್ 5 ರಾಷ್ಟ್ರಗಳ ಪೈಕಿ ಒಂದೆಂದು ಪರಿಗಣಿಸುತ್ತಿತ್ತು. ವಿಶ್ವವನ್ನು ಅಧೋಗತಿಗೆ ಕೊಂಡೊಯ್ಯುವುದರಲ್ಲಿ ಭಾರತ ಪ್ರಮುಖ ಪಾತ್ರವಹಿಸುತ್ತಿದೆ ಎಂದು ವಿಶ್ವವೇ ಚಿಂತೆಗೊಳಗಾಗಿತ್ತು. ಆದರೆ ಕಾಲ ಬದಲಾಗಿದೆ ಇಂದು ಭಾರತ ಬಹು ಕೋಟಿ ಡಾಲರ್‌ಗಳ ಹಣ ಹೂಡಿಕೆಯ ಗಮ್ಯಸ್ಥಾನವಾಗಿದೆ.
ನನ್ನ ಪ್ರೀತಿಯ ಸೋದರ ಸೋದರಿಯರೇ,
ಭಾರತದೊಂದಿಗೆ ಕೈಗೂಡಿಸುವಾಗ, ಹೂಡಿಕೆದಾರರು, ನಮ್ಮ ಮೂಲಭೂತ ಸೌಕರ್ಯಗಳ ಕೊರತೆ, ವಿದ್ಯುತ್ ಕೊರತೆಯಿಂದಾಗಿ ಹಿಂದೆ ಸರಿದಿದ್ದವು. ಈ ಹಿಂದೆ ಭಾರತವನ್ನು ಮಲಗಿದ ಆನೆ ಎಂದು ಕರೆಯುತ್ತಿದ್ದ ಅದೇ ತಜ್ಞರು, ಇಂದು ಮಲಗಿದ ಆನೆ, ಎಚ್ಚರಗೊಂಡಿದೆ, ಮುಂದೆ ಸಾಗಿದೆ, ಮಲಗಿದ ಆನೆ ಓಡಲಾರಂಭಿಸಿದೆ ಎನ್ನುತ್ತಿದ್ದಾರೆ. ವಿಶ್ವದ ಅರ್ಥ ಶಾಸ್ತ್ರಜ್ಞರು, ಅಂತಾರಾಷ್ಟ್ರೀಯ ಸಂಸ್ಥೆಗಳು ಮುಂಬರುವ 3 ದಶಕಗಳವರೆಗೆ ವಿಶ್ವದ ಅರ್ಥವ್ಯವಸ್ಥೆಗೆ ಭಾರತ ರಹದಾರಿಯಾಗಲಿದೆ. ವಿಶ್ವದ ವಿಕಾಸಕ್ಕೆ ಹೊಸ ಮಾದರಿಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಿವೆ.
ನನ್ನ ಪ್ರೀತಿಯ ದೇಶವಾಸಿಗಳೇ,
ಇಂದು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಘನತೆ ಹೆಚ್ಚಿದೆ. ಭಾರತ ಯಾವ ಯಾವ ಸಂಘಟನೆಗಳಲ್ಲಿ ಸದಸ್ಯನಾಗಿದೆಯೋ ಅಲ್ಲೆಲ್ಲಾ, ಭಾರತದ ಧ್ವನಿಯನ್ನು ಪರಿಗಣಿಸಲಾಗುತ್ತಿದೆ. ಭಾರತವು ಈ ಸಂಸ್ಥೆಗಳಿಗೆ ಗುರಿ ತೋರಿಸುವಲ್ಲಿ, ನೇತೃತ್ವ ವಹಿಸುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ. ನಾವು ಜಾಗತಿಕ ವೇದಿಕೆಯಲ್ಲಿ ನಮ್ಮ ಧ್ವನಿಯನ್ನು ಎತ್ತುತ್ತಿದ್ದೇವೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಾವು ಕೆಲವು ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಸದಸ್ಯತ್ವ ಕೋರಿ ಬಹಳ ವರ್ಷಗಳಿಂದ ಕಾಯುತ್ತಿದ್ದೆವು. ಆದರೆ ಇಂದು ಭಾರತ ಜಗತ್ತಿನ ಅಂಥ ಅಸಂಖ್ಯಾತ ಸಂಸ್ಥೆಗಳಲ್ಲಿ ಸ್ಥಾನ ಪಡೆದಿದೆ. ಇಂದು ಭಾರತವು ಪರಿಸರದ ಕಾಳಜಿ ವ್ಯಕ್ತಪಡಿಸುವವರಿಗಾಗಿ, ಜಾಗತಿಕ ತಾಪಮಾನದ ಬಗ್ಗೆ ಚರ್ಚೆ ಮಾಡುವವರಿಗಾಗಿ ಒಂದು ಆಶಾಕಿರಣವಾಗಿದೆ. ಭಾರತವು ಅಂತಾರಾಷ್ಟ್ರೀಯ ಸೌರ ಸಹಯೋಗದ ನೇತೃತ್ವ ವಹಿಸಿದೆ. ಇಂದು ಯಾವುದೇ ದೇಶ ತನ್ನ ನೆಲದಲ್ಲಿ ಕಾಲಿಡುವ ಯಾವುದೇ ಭಾರತೀಯನನ್ನು ಸ್ವಾಗತಿಸಲು ಉತ್ಸುಕವಾಗಿದೆ. ಭಾರತೀಯರನ್ನು ನೋಡಿ ಅವರ ಕಣ್ಣಿನಲ್ಲಿ ಒಂದು ರೀತಿಯ ಹೊಳಪು ಮೂಡುತ್ತದೆ. ಭಾರತದ ಪಾಸ್ ಪೋರ್ಟ್‌ನ ಶಕ್ತಿ ದುಪ್ಪಟ್ಟಾಗಿದೆ. ಪ್ರತಿ ಭಾರತೀಯರ ಆತ್ಮವಿಶ್ವಾಸವು ಒಂದು ಹೊಸ ಶಕ್ತಿ ಮತ್ತು ಹೊಸ ಹುರುಪಿನೊಂದಿಗೆ ಮುಂದುವರೆಯುವ ಸಂಕಲ್ಪವನ್ನು ಹುಟ್ಟುಹಾಕಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಭಾರತೀಯರು ಜಗತ್ತಿನಲ್ಲಿ ಯಾವುದೇ ಸ್ಥಳದಲ್ಲಿಯಾದರೂ ಸಂಕಷ್ಟದಲ್ಲಿದ್ದರೆ, ನನ್ನ ದೇಶವು ನನ್ನ ಬೆಂಬಲಕ್ಕೆ ನಿಲ್ಲುತ್ತದೆ, ನನ್ನ ದೇಶವು ಸಂಕಟದ ಸಮಯದಲ್ಲಿ ನನ್ನ ಜೊತೆಗೆ ಬರುತ್ತದೆ ಎನ್ನುವ ಭರವಸೆ ಅವರಿಗೆ ಇದೆ. ಇತ್ತೀಚಿನ ದಿನಗಳ ಹಲವಾರು ಘಟನೆಗಳು ಇದಕ್ಕೆ ಸಾಕ್ಷಿಯಾಗಿವೆ.
ನನ್ನ ಪ್ರೀತಿಯ ದೇಶವಾಸಿಗಳೇ, ಜಗತ್ತಿನಲ್ಲಿ ಭಾರತದ ಕಡೆಗೆ ನೋಡುವ ದೃಷ್ಟಿಕೋನ ಹೇಗೆ ಬದಲಾಯಿತೋ ಹಾಗೆಯೇ ಭಾರತದಲ್ಲಿ ಸಹ ಈಶಾನ್ಯ ರಾಜ್ಯಗಳ ಬಗ್ಗೆ ಹೀಗೆಯೇ ಆಯಿತು. ಈಶಾನ್ಯ ರಾಜ್ಯಗಳ ಬಗ್ಗೆ ಚರ್ಚೆಗಳು ಆದಾಗ ಎಂಥಹ ಸುದ್ದಿಗಳು ಬರುತ್ತಿದ್ದವೆಂದರೆ ಆ ವಿಷಯಗಳು ಬಾರದಿದ್ದರೆ ಚೆನ್ನಾಗಿತ್ತು ಎನ್ನಿಸುತ್ತಿತ್ತು. ಆದರೆ ಇಂದು ನನ್ನ ಸೋದರ ಸೋದರಿಯರೆ, ಈಶಾನ್ಯ ರಾಜ್ಯಗಳು ದೇಶಕ್ಕೆಲ್ಲಾ ಪ್ರೇರಣೆ ನೀಡುವಂತಹ ಸುದ್ದಿಗಳನ್ನು ಹೊತ್ತುತರುತ್ತಿವೆ. ಇಂದು ಈಶಾನ್ಯ ರಾಜ್ಯಗಳು ಕ್ರೀಡಾ ಕ್ಷೇತ್ರದಲ್ಲಿ ಮಿನುಗುತ್ತಿವೆ.
ನನ್ನ ಸೋದರ ಸೋದರಿಯರೇ, ಇಂದು ನಾವು ಈಶಾನ್ಯ ರಾಜ್ಯದಿಂದ ಸುದ್ದಿ ಕೇಳುತ್ತಿದ್ದೇವೆ. "ಕಟ್ಟಕಡೆಯ ಹಳ್ಳಿಗೂ ಸಹ ವಿದ್ಯುತ್ ಸಂಪರ್ಕ ತಲುಪಿದೆ, ರಾತ್ರಿಯೆಲ್ಲಾ ಇಡೀ ಹಳ್ಳಿ ಸಂತೋಷದಿಂದ ಸಂಭ್ರಮಿಸುತ್ತಿದೆ". ನಾವು ಇಂಥ ಹಲವು ಸುದ್ದಿಗಳನ್ನು ಇಂದು ಈಶಾನ್ಯ ರಾಜ್ಯಗಳಿಂದ ಕೇಳುತ್ತಿದ್ದೇವೆ. ಹೆದ್ದಾರಿ, ರೈಲ್ವೆ, ವಾಯುಯಾನ, ಜಲ ಮಾರ್ಗ ಮತ್ತು ಮಾಹಿತಿ ಮಾರ್ಗ (ಐವೇ) ದಂತಹ ಸುದ್ದಿಗಳು ಬರುತ್ತಿವೆ. ಈಶಾನ್ಯ ರಾಜ್ಯಗಳ ಕಡೆಗೆ ವಿದ್ಯುತ್ ಪ್ರಸರಣಾ ಜಾಲವನ್ನು ವಿಸ್ತರಿಸುವ ಕೆಲಸ ಇಂದು ಭರದಿಂದ ನಡೆಯುತ್ತಿದೆ. ನಮ್ಮ ಈಶಾನ್ಯ ರಾಜ್ಯಗಳ ನವಯುವಕರು ಅಲ್ಲಿ ಬಿ.ಪಿ.ಓ. ಗಳನ್ನು ಪ್ರಾರಂಭಿಸುತ್ತಿದ್ದಾರೆ. ಹೊಸ ಶೈಕ್ಷಣಿಕ ಸಂಸ್ಥೆಗಳು ಸ್ಥಾಪನೆಯಾಗುತ್ತಿವೆ ಮತ್ತು ಈಶಾನ್ಯ ರಾಜ್ಯಗಳು ಸಾವಯುವ ಕೃಷಿ ಕೇಂದ್ರಗಳಾಗಿ ಪರಿವರ್ತಿತವಾಗುತ್ತಿವೆ. ಈಶಾನ್ಯ ರಾಜ್ಯ ಕ್ರೀಡಾ ವಿಶ್ವವಿದ್ಯಾಲಯದ ಆತಿಥ್ಯ ವಹಿಸುತ್ತಿದೆ.
ಸೋದರ ಸೋದರಿಯರೇ, ಒಂದು ಕಾಲದಲ್ಲಿ ಈಶಾನ್ಯ ರಾಜ್ಯಗಳಿಗೆ ದೆಹಲಿಯು ಬಹಳ ದೂರವೆನಿಸುತ್ತಿತ್ತು. ನಾವು 4 ವರ್ಷಗಳಲ್ಲೇ ದೆಹಲಿಯನ್ನು ಈಶಾನ್ಯ ರಾಜ್ಯಗಳ ಮನೆಗಳ ಬಾಗಿಲಿನ ಸಮೀಪಕ್ಕೆ ತಂದು ನಿಲ್ಲಿಸಿದ್ದೇವೆ
ಸೋದರ ಸೋದರಿಯರೇ, ಇಂದು ನಮ್ಮ ದೇಶದ ಶೇಕಡಾ 65ರಷ್ಟು ಜನಸಂಖ್ಯೆ 35 ವರ್ಷ ವಯಸ್ಸಿನ ಒಳಗಿನವರು. ನಾವು ದೇಶದ ಯುವ ಜನರ ಬಗ್ಗೆ ಹೆಮ್ಮೆ ಪಡುತ್ತೇವೆ,ನಮ್ಮ ದೇಶದ ಯುವಜನರು ಇಂದು ಆರ್ಥಿಕ ಜಗತ್ತಿನ ಎಲ್ಲಾ ಮಾನದಂಡಗಳನ್ನೂ ಪರಿವರ್ತಿಸಿದ್ದಾರೆ; ಅವರು ದೇಶದ ಗುಣಮಟ್ಟದ ಪ್ರಗತಿಗೆ ಹೊಸ ರಂಗನ್ನು ತುಂಬಿದ್ದಾರೆ. ದೊಡ್ಡ ನಗರಗಳು ಮಾತ್ರ ಪ್ರಚಾರ ಪಡೆಯುವ ಕಾಲವೊಂದಿತ್ತು. ಇಂದು 2ನೇ ಹಾಗೂ 3ನೇ ಹಂತದ ನಗರಗಳು ಗಮನ ಸೆಳೆಯುತ್ತಿವೆ. ಕೆಲವೊಮ್ಮೆ ಹಳ್ಳಿಗಳ ಒಳಹೊಕ್ಕು ಆಧುನಿಕ ಕೃಷಿ ಕೈಗೊಂಡಿರುವ ನವಯುವಕರ ಬಗ್ಗೆ ಮಾತನಾಡಲಾಗುತ್ತಿದೆ. ನಮ್ಮ ದೇಶದ ನವಯುವಕರು ಕೆಲಸದ ಮಾದರಿಯನ್ನೇ ಸಂಪೂರ್ಣವಾಗಿ ಬದಲಾಯಿಸಿದ್ದಾರೆ. ನವೋಧ್ಯಮ ಆಗಿರಲಿ, ಬಿಪಿಓಗಳಾಗಿರಲಿ, ಇ-ಕಾಮರ್ಸ್ ಆಗಿರಲಿ, ಸಾರಿಗೆ ಆಗಿರಲಿ, ಇಂತಹ ಹೊಸಹೊಸ ಕ್ಷೇತ್ರಗಳನ್ನು ಇಂದು ನಮ್ಮ ದೇಶದ ಯುವಕರು ಆಪ್ತವಾಗಿ ಅಪ್ಪಿಕೊಂಡು ಹೊಸ ಎತ್ತರಕ್ಕೆ ಕೊಂಡೊಯ್ಯಲು ಟೊಂಕ ಕಟ್ಟಿ ನಿಂತಿದ್ದಾರೆ.
ನನ್ನ ಪ್ರೀತಿಯ ದೇಶವಾಸಿಗಳೇ, 13 ಕೋಟಿ ಜನರಿಗೆ ಮುದ್ರಾ ಸಾಲವು ಬಹಳ ದೊಡ್ಡ ಸಾಧನೆಯಾಗಿದೆ. ಅದರಲ್ಲೂ 4 ಕೋಟಿ ನವ ಯುವಕರು ಮೊದಲ ಬಾರಿಗೆ ಬ್ಯಾಂಕ್‌ನಿಂದ ಸಾಲ ಪಡೆದು ಸ್ವಾವಲಂಬಿಗಳಾಗಿ ಸ್ವಉದ್ಯೋಗ ಉತ್ತೇಜಿಸುತ್ತಿದ್ದಾರೆ. ಇದು ಬದಲಾಗುತ್ತಿರುವ ವಾತಾವರಣದ ಒಂದು ದೊಡ್ಡ ಉದಾಹರಣೆಯಾಗಿದೆ. ಇಂದು ಭಾರತದ ಹಳ್ಳಿಗಳಲ್ಲಿ ಡಿಜಿಟಲ್ ಇಂಡಿಯಾದ ಕನಸನ್ನು ನನಸಾಗಿಸಲು 3 ಲಕ್ಷಕ್ಕೂ ಅಧಿಕ ಹಳ್ಳಿಗಳಲ್ಲಿ ಕಾಮನ್ ಸರ್ವಿಸ್ ಸೆಂಟರ್ ಗಳನ್ನೂ ನಮ್ಮ ದೇಶದ ಯುವಕರು ಯುವತಿಯರು ನಡೆಸುತ್ತಿದ್ದಾರೆ. ಈ ಕೇಂದ್ರಗಳು ಪ್ರತಿ ನಾಗರಿಕರೂ ಒಂದು ಕ್ಲಿಕ್ ನಲ್ಲಿ ಜಾಗತಿಕ ಸಂಪರ್ಕ/ಯಾವುದೇಸಮಯ-ಎಲ್ಲೆಡೆಗೆ ಸಂಪರ್ಕ ಹೊಂದಲು ಮಾಹಿತಿ ತಂತ್ರಜ್ಞಾನದ ಸಂಪೂರ್ಣ ಉಪಯೋಗವನ್ನು ಮಾಡಿಕೊಳ್ಳುತ್ತಿದ್ದಾರೆ.
ದೇಶದಲ್ಲಿ ಮೂಲಸೌಕರ್ಯಗಳ ಬಗ್ಗೆ ಮಾತನಾಡುವುದಾದರೆ,. ರೈಲುಗಳ ವೇಗವಾಗಲಿ, ರಸ್ತೆಗಳ ಮೇಲಿನ ವೇಗವಾಗಲಿ, ಹೈವೇ ಗಳಾಗಲಿ, ಐ ವೇ ಗಳಾಗಲಿ, ಹೊಸ ಏರ್ ಪೋರ್ಟ್ ಗಳಾಗಲಿ, ಒಂದು ರೀತಿಯಲ್ಲಿ ನಮ್ಮ ದೇಶವು ಬಹಳ ವೇಗವಾಗಿ ಅಭಿವೃದ್ಧಿಕಾಣುತ್ತಿದೆ.
ಸಹೋದರ ಸಹೋದರಿಯರೇ, ನಮ್ಮ ದೇಶದ ವಿಜ್ಞಾನಿಗಳು ಸಹ ದೇಶದ ವೈಭವವನ್ನು ಉಜ್ವಲಗೊಳಿಸುವುದರಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಜಾಗತಿಕ ಸಂದರ್ಭಗಳಾಗಲಿ ಅಥವಾ ಭಾರತದ ಅವಶ್ಯಕತೆಯ ಸಂದರ್ಭಗಳಾಗಲಿ, ನಮ್ಮ ದೇಶದ ವಿಜ್ಞಾನಿಗಳು ಒಂದೇ ಬಾರಿಗೆ ನೂರಕ್ಕೂ ಅಧಿಕ ಸಂಖ್ಯೆಯ ಉಪಗ್ರಹಗಳನ್ನು ಉಡಾವಣೆ ಮಾಡಿದ್ದಾರೆ.ಇದು ನಮ್ಮ ವಿಜ್ಞಾನಿಗಳ ಸಾಮರ್ಥ್ಯ; ಇದು ವಿಶ್ವವೇ ಎದ್ದು ನಿಂತು ಅಭಿನಂದಿಸುವಂತೆ ಮಾಡಿದೆ. ನಮ್ಮ ವಿಜ್ಞಾನಿಗಳು ಮಂಗಳಯಾನದಲ್ಲಿ ಮೊದಲನೇ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ. ಇದು ನಮ್ಮ ವಿಜ್ಞಾನಿಗಳ ಪ್ರಯತ್ನಕ್ಕೆ ಸಿಕ್ಕ ಫಲ. ಮುಂಬರುವ ಕೆಲವು ದಿನಗಳಲ್ಲಿ ನಮ್ಮ ವಿಜ್ಞಾನಿಗಳ ಶ್ರಮ, ಕಲ್ಪನೆ ಮತ್ತು ಸಂಶೋಧನೆಯ ಫಲವಾಗಿ ದೇಶದ ಮೀನುಗಾರರಿಗೆ ಮತ್ತು ಸಾಮಾನ್ಯ ನಾಗರೀಕರಿಗೆ ’ನಾವಿಕ್ ’ ನ ಮೂಲಕ ಪಥ ದರ್ಶಕದ ಒಂದು ಬಹು ದೊಡ್ಡ ಕೆಲಸವನ್ನು ನಾವು ಆರಂಭಿಸುತ್ತಿದ್ದೇವೆ. ಈ ಪಥದರ್ಶಕ ವ್ಯವಸ್ಥೆಯು ಮೀನುಗಾರರಿಗೆ ಮತ್ತು ಇತರ ನಾಗರಿಕರಿಗೆ ಉಪಗ್ರಹದ ಸಂಕೇತದ ಮೂಲಕ ಮಾರ್ಗದರ್ಶನ ಮಾಡುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಈ ಕೆಂಪುಕೋಟೆಯ ಮೇಲಿನ ವೇದಿಕೆಯಿಂದ ಒಂದು ಸಂತಸದ ಸುದ್ದಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಮ್ಮ ದೇಶವು ಬಾಹ್ಯಾಕಾಶ ಅಭಿಯಾನಗಳಲ್ಲಿ ಪ್ರಗತಿ ಸಾಧಿಸುತ್ತಿತ್ತು. ಆದರೆ ನಾವು ಕನಸು ಕಂಡಿದ್ದೆವು, ನಮ್ಮ ವಿಜ್ಞಾನಿಗಳು ಕನಸು ಕಂಡಿದ್ದರು, ನಮ್ಮ ದೇಶವು ಸಂಕಲ್ಪ ಮಾಡಿದೆ,2022ರಲ್ಲಿ ಅಥವಾ ಸಾಧ್ಯವಾದರೆ ಅದಕ್ಕಿಂತ ಮುಂಚಿತವಾಗಿ ಸ್ವಾತಂತ್ರ್ಯದ 75 ನೇ ವರ್ಷ ಆಚರಿಸುವ ಸಂದರ್ಭದಲ್ಲಿ ತಾಯಿ ಭಾರತೀಯ ಯಾವುದೇ ಸಂತಾನ - ಮಗನಾಗಲಿ, ಮಗಳಾಗಲಿ, ಯಾರಾದರೂ ಇರಬಹುದು- ಅವರು ಅಂತರಿಕ್ಷಕ್ಕೆ ಪ್ರಯಾಣ ಬೆಳೆಸುತ್ತಾರೆ. ಮಂಗಳಯಾನದ ಮೂಲಕ ಭಾರತದ ವಿಜ್ಞಾನಿಗಳು ತಮ್ಮ ಸಾಮರ್ಥ್ಯದ ಪರಿಚಯ ಮಾಡಿಸಿದ್ದಾರೆ. ಈಗ ನಾವು ಮಾನವ ಸಹಿತ ಗಗನಯಾನವನ್ನು ಕೈಗೊಳ್ಳುತ್ತೇವೆ; ಮತ್ತು ಈ ಗಗನನೌಕೆಯು ಅಂತರಿಕ್ಷಕ್ಕೆ ಹೋಗುವಾಗ ಭಾರತೀಯನನ್ನು ಹೊತ್ತೊಯ್ಯುತ್ತದೆ. ಭಾರತೀಯ ವಿಜ್ಞಾನಿಗಳ ಮೂಲಕ, ಭಾರತದ ಯಶಸ್ಸಿನೊಂದಿಗೆ ಈ ಕೆಲಸ ಸಾಧ್ಯವಾಗುವಾಗ ಮಾನವನನ್ನು ಅಂತರಿಕ್ಷಕ್ಕೆ ಕರೆದೊಯ್ಯುವವರಲ್ಲಿ ನಾವು ವಿಶ್ವದಲ್ಲೇ ನಾಲ್ಕನೆಯ ರಾಷ್ಟ್ರವಾಗುತ್ತೇವೆ.
ಪ್ರೀತಿಯ ಸಹೋದರ ಸಹೋದರಿಯರೇ, ಈ ಮಹಾನ್ ಕಾರ್ಯಕ್ಕೆ ನಾನು ದೇಶದ ವಿಜ್ಞಾನಿಗಳು ಮತ್ತು ತಂತ್ರಜ್ಞರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಇಂದು ನಮ್ಮ ಗೋದಾಮುಗಳು ಆಹಾರಧಾನ್ಯದಿಂದ ತುಂಬಿ ತುಳುಕುತ್ತಿವೆ. ಆಹಾರ ಧಾನ್ಯಗಳ ದಾಖಲೆಯ ಉತ್ಪಾದನೆಯಾಗಿದೆ. ನಾನು ದೇಶದ ರೈತರಿಗೆ, ಕೃಷಿ ಕಾರ್ಮಿಕರಿಗೆ, ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವಿಜ್ಞಾನಿಗಳಿಗೆ ದೇಶದಲ್ಲಿ ಕೃಷಿ ಕ್ರಾಂತಿಯನ್ನು ಸಫಲವಾಗಿ ಯಶಸ್ವಿಗೊಳಿಸಿರುವುದಕ್ಕೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ.
ಪ್ರೀತಿಯ ಸಹೋದರ ಸಹೋದರಿಯರೇ, ಈಗ ಸಮಯ ಬದಲಾಗಿದೆ. ನಮ್ಮ ರೈತರೂ ಮತ್ತು ನಮ್ಮ ಕೃಷಿ ಮಾರುಕಟ್ಟೆಗಳೂ ಕೂಡ ಜಾಗತಿಕ ಸವಾಲುಗಳನ್ನು ಎದುರಿಸಬೇಕಾಗಿದೆ. ವಿಶ್ವ ಮಾರುಕಟ್ಟೆಯನ್ನು ಎದುರಿಸಬೇಕಾಗುತ್ತದೆ. ಜನಸಂಖ್ಯೆ ಬೆಳೆಯುತ್ತಿದ್ದಂತೆ ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಇದು ನಮ್ಮ ಕೃಷಿಯನ್ನು ಆಧುನೀಕರಣಗೊಳಿಸಲು, ವೈಜ್ಞಾನಿಕವಾಗಿಸಲು, ತಾಂತ್ರಿಕ ಬಲದಿಂದ ಮುಂದುವರೆಸಲು ಇದು ಸರಿಯಾದ ಕಾಲ. ಆದ್ದರಿಂದ ಇಂದು ನಮ್ಮ ಸಂಪೂರ್ಣ ಗಮನ ಕೃಷಿ ಕ್ಷೇತ್ರವನ್ನು ಆಧುನೀಕರಣಗೊಳಿಸಲು, ಬದಲಾವಣೆ ತರಲು ಕೇಂದ್ರೀಕೃತವಾಗಿದೆ.
ಸ್ವಾತಂತ್ರ್ಯಾನಂತರ 75 ವರ್ಷಗಳ ಬಳಿಕ ರೈತರ ಆದಾಯವನ್ನು ದುಪ್ಪಟ್ಟುಗೊಳಿಸಲು ನಾವು ಮುನ್ನೋಟ ಹೊಂದಿದ್ದೇವೆ. ಕೆಲವರಿಗೆ ಇದರ ಬಗ್ಗೆ ಅನುಮಾನವಿದೆ. ಅದು ಬಹಳ ಸ್ವಾಭಾವಿಕ. ಆದರೆ ನಾವು ಗುರಿಯನ್ನು ಇಟ್ಟುಕೊಂಡು ನಡೆದಿದ್ದೇವೆ. ನಾವು ಬೆಣ್ಣೆಯ ಮೇಲೆ ಗೆರೆ ಎಳೆಯುವ ಜಾಯಮಾನದವರಲ್ಲ ಬದಲಿಗೆ ಕಲ್ಲಿನ ಮೇಲೆ ಗೆರೆ ಎಳೆಯುವ ಸ್ವಭಾವದವರು. ಇದಕ್ಕಾಗಿ ಶ್ರಮಪಡಬೇಕಾಗುತ್ತದೆ.ಯೋಜನೆ ರೂಪಿಸಬೇಕಾಗುತ್ತದೆ. ಅದನ್ನು ಸಾಕಾರಗೊಳಿಸಲು ನಮ್ಮ ಆತ್ಮ ಮತ್ತು ಚೈತನ್ಯ ಧಾರೆ ಎರೆಯಬೇಕಾಗುತ್ತದೆ. ಆದ್ದರಿಂದ ಸ್ವಾತಂತ್ರ್ಯ ಬಂದು 75 ವರ್ಷಗಳು ಆಗುವ ತನಕ ದೇಶದ ರೈತರನ್ನು ಒಗ್ಗೂಡಿಸಿಕೊಂಡು, ಕೃಷಿಯಲ್ಲಿ ಆಧುನಿಕತೆಯನ್ನು ತಂದುಕೊಂಡು, ಕೃಷಿಯ ಚಟುವಟಿಕೆಯ ವಿಸ್ತೀರ್ಣವನ್ನು ಹೆಚ್ಚಿಸಿಕೊಂಡು ಇಂದು ನಾವು ನಡೆಯಲು ಇಚ್ಚಿಸುತ್ತೇವೆ. ಬೀಜದಿಂದ ಬಜಾರ್ ವರೆಗೆ ನಾವು ವ್ಯಾಲ್ಯೂ ಮೌಲ್ಯವರ್ಧನೆ ಮಾಡಲು ಇಚ್ಚಿಸುತ್ತೇವೆ; ನಾವು ಆಧುನೀಕರಣಗೊಳಿಸಲು ಇಚ್ಚಿಸುತ್ತೇವೆ ಮತ್ತು ಎಷ್ಟೋ ಹೊಸ ಉತ್ಪನ್ನಗಳು ದಾಖಲೆಯ ಉತ್ಪಾದನೆಯನ್ನು ಮೀರಿ ಮುನ್ನುಗ್ಗುತ್ತಿವೆ. ಇಂದು ನಮ್ಮ ದೇಶದ ರೈತರೂ ಕೂಡ ಜಾಗತಿಕ ಮಾರುಕಟ್ಟೆಯಲ್ಲಿ ಆತ್ಮವಿಶ್ವಾಸದಿಂದ ಸಾಗಲಿ ಎಂಬ ಆಶಯದೊಂದಿಗೆ ಮೊದಲಬಾರಿಗೆ ನಾವು ದೇಶದಲ್ಲಿ ಕೃಷಿ ರಫ್ತು ನೀತಿಯೆಡೆಗೆ ಮುನ್ನುಗ್ಗುತ್ತಿದ್ದೇವೆ. ಇಂದು ಹೊಸ ಕೃಷಿ ಕ್ರಾಂತಿ, ಸಾವಯವ ಕೃಷಿ, ಮೀನುಗಾರಿಕೆ, ಸಿಹಿ ಕ್ರಾಂತಿ, ಸೌರ ಕೃಷಿಗಳು ಹೊಸದಾಗಿ ತೆರೆದುಕೊಂಡಿವೆ.
ಮೀನು ಉತ್ಪಾದನೆಯಲ್ಲಿ ನಮ್ಮ ದೇಶ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ ಎನ್ನುವುದು ಸಂತಸದ ವಿಷಯ. ನೋಡು ನೋಡುತ್ತಿದ್ದಂತೆ ಅದು ಮೊದಲನೇ ಸ್ಥಾನಕ್ಕೆ ಏರುವುದರಲ್ಲಿದೆ. ಇಂದು ಜೇನಿನ ರಫ್ತು ದ್ವಿಗುಣವಾಗಿದೆ. ನಮ್ಮ ಎಥೆನಾಲ್ ನ ಉತ್ಪಾದನೆಯು ಮೂರು ಪಟ್ಟು ಹೆಚ್ಚಾಗಿದೆ ಎಂದು ತಿಳಿದು ನಮ್ಮ ಕಬ್ಬು ಬೆಳೆಗಾರರಿಗೆ ಸಂತೋಷವಾಗಬಹುದು. ಹೀಗೆ ಗ್ರಾಮೀಣ ಆರ್ಥಿಕತೆಯಲ್ಲಿ ಎಷ್ಟು ಕೃಷಿಗೆ ಮಹತ್ವವಿದೆಯೋ ಅಷ್ಟೇ ಮಹತ್ವ ಬೇರೆ ಉದ್ದಿಮೆಗಳಿಗೂ ಇದೆ. ಹೀಗಾಗಿ ನಾವು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಗ್ರಾಮೀಣ ಸಂಪನ್ಮೂಲ ಅಭಿವೃದ್ಧಿ ಪಡಿಸುತ್ತಿದ್ದೇವೆ.
ಖಾದಿಯು ಪೂಜ್ಯ ಬಾಪೂರವರ ಹೆಸರಿನೊಂದಿಗೆ ಸೇರಿಕೊಂಡಿದೆ. ಸ್ವಾತಂತ್ರ್ಯಾನಂತರದಿಂದ ಇಂದಿನವರೆಗೆ ಆಗಿರುವ ಖಾದಿಯ ಮಾರಾಟಕ್ಕೆ ಹೋಲಿಸಿದರೆ, ಈಗ ಅದು ದುಪ್ಪಟ್ಟಾಗಿದೆ ಎಂದು ನಾನು ವಿನಮ್ರನಾಗಿ ಹೇಳಲಿಚ್ಛಿಸುತ್ತೇನೆ. ಇದು ಬಡಜನರಿಗೆ ಉದ್ಯೋಗ ಸೃಷ್ಟಿಸುತ್ತಿದೆ.
ನನ್ನ ಸಹೋದರ ಸಹೋದರಿಯರೇ, ನಮ್ಮ ದೇಶದ ರೈತರು ಇಂದು ಸೌರ ಕೃಷಿಯ ಬಗ್ಗೆ ಕೂಡ ಗಮನ ಹರಿಸುತ್ತಿದ್ದಾರೆ. ಕೃಷಿಯೇತರ ಸಮಯದಲ್ಲಿ ಅವರು ಸೌರ ಕೃಷಿಯಿಂದ ವಿದ್ಯುತ್ ಮಾರಾಟ ಮಾಡಿ ಆದಾಯ ಗಳಿಸಿಕೊಳ್ಳಬಹುದು. ಚರಕದಿಂದ ನೂಲುವವರು, ಕೈಮಗ್ಗದೊಂದಿಗೆ ನಂಟಿರುವ, ನೇಕಾರರು ಇವರೆಲ್ಲರೂ ಜೀವನೋಪಾಯ ಕಂಡುಕೊಂಡಿದ್ದಾರೆ.
ನನ್ನ ಸೋದರ ಸೋದರಿಯರೇ, ನಮ್ಮ ದೇಶದಲ್ಲಿ ಆರ್ಥಿಕ ಪ್ರಗತಿ ಮಹತ್ವದ್ದಾಗಿದೆ. ಇದಕ್ಕಿಂತ ಮಿಗಿಲಾಗಿ ಮನುಷ್ಯತ್ವ ಯಾವಾಗಲೂ ಉತ್ತುಂಗದಲ್ಲಿರುತ್ತದೆ. ಮಾನವತೆಯ ಗರಿಮೆಯ ಹೊರತಾಗಿ ದೇಶವು ಸಮತೋಲನದಲ್ಲಿ ಜೀವಿಸಲು, ನಡೆಯಲು, ಮುಂದುವರೆಯಲು ಸಾಧ್ಯವಿಲ್ಲ. ಆದ್ದರಿಂದ ಜನರು ಗೌರವಯುತ ಮತ್ತು ಹೆಮ್ಮೆಯ ಜೀವನವನ್ನು ನಡೆಸಲು ಸಾಧ್ಯವಾಗುವಂತೆ ಯಾವುದೇ ಯೋಜನೆಗಳಾದರೂ ವ್ಯಕ್ತಿಯ ಗರಿಮೆ, ಆತ್ಮಸಮ್ಮಾನ ಇವುಗಳನ್ನು ಜೊತೆಗೂಡಿಸಿಕೊಂಡು ಮುಂದೆ ಹೋಗಬೇಕು. ಸಾಮಾನ್ಯ ಜನರು, ಕಡು ಬಡವರು ಸಹ ಸಮಾನ ಜೀವನ ನಡೆಸಲು ಅವಕಾಶ ಮಾಡಿಕೊಡುವಂತೆ ರೀತಿ, ನೀತಿ ಮತ್ತು ನಿಯಮಗಳು ಇರಬೇಕು.
ಆದ್ದರಿಂದ ನಾವು ಉಜ್ವಲಾ ಯೋಜನೆಯ ಮೂಲಕ ಬಡವರ ಮನೆಗೆ ಅಡುಗೆ ಅನಿಲ ಸಂಪರ್ಕ ತಲುಪಿಸುವ ಕೆಲಸ ಮಾಡಿದ್ದೇವೆ, ಸೌಭಾಗ್ಯ ಯೋಜನೆಯ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಮಾಡಿದ್ದೇವೆ, ’ಶ್ರಮೇವ ಜಯತೆ’ಎನ್ನುವುದಕ್ಕೆ ಹೆಚ್ಚು ಒತ್ತು ಕೊಟ್ಟು ನಾವು ಮುಂದುವರೆಯುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ.
ನಿನ್ನೆಯಷ್ಟೇ, ನಾವು ನಮ್ಮ ಗೌರವಾನ್ವಿತ ರಾಷ್ಟ್ರಪತಿಗಳ ಭಾಷಣ ಕೇಳಿದೆವು. ಅವರು ಗ್ರಾಮ ಸ್ವರಾಜ್ಯ ಅಭಿಯಾನದ ಬಗ್ಗೆ ವಿಸ್ತಾರವಾಗಿ ಹೇಳಿದರು. ಸರಕಾರದ ಬಂದಾಗ, ನೀತಿಗಳು ರೂಪಿಸಲ್ಪಡುತ್ತವೆ, ಆದರೆ ಅದು ಕೊನೆಯ ವ್ಯಕ್ತಿಗೆ ತಲುಪುವುದಿಲ್ಲ ಎನ್ನುವ ಮಾತು ಕೇಳಿ ಬರುತ್ತದೆ. ಆಶಯ ಜಿಲ್ಲೆಗಳ 65 ಸಾವಿರ ಗ್ರಾಮಗಳಿಗೆ ದೆಹಲಿಯಲ್ಲಿ ರೂಪಿಸಿದ ಯೋಜನೆಗಳು ಬಡವರ ಮನೆಗಳ ತನಕ, ಹಿಂದುಳಿದ ಹಳ್ಳಿಗಳಿಗೆ ಹೇಗೆ ತಲುಪಿಸಲಾಗಿದೆ, ಯಾವ ರೀತಿ ಕೆಲಸ ಮಾಡಲಾಗಿದೆ ಎನ್ನುವುದನ್ನು ನಿನ್ನೆ ನಮ್ಮ ರಾಷ್ಟ್ರಪತಿಗಳು ಬಹಳ ಚೆನ್ನಾಗಿ ವಿವರಿಸಿದರು.
ಪ್ರೀತಿಯ ದೇಶವಾಸಿಗಳೇ,2014ರಲ್ಲಿ ಇದೇ ಕೆಂಪುಕೋಟೆಯ ಮೇಲಿನಿಂದ ನಾನು ಸ್ವಚ್ಛತೆಯ ಬಗ್ಗೆ ಮಾತನಾಡಿದ್ದೆ, ಆಗ ಕೆಲವು ಜನರು ಅದರ ಬಗ್ಗೆ ಹಗುರವಾಗಿ ಮಾತನಾಡಿದ್ದರು. ಕೆಲವರು "ಅರೇ , ಸರ್ಕಾರಕ್ಕೆಮಾಡಲು ಬಹಳಷ್ಟು ಕೆಲಸಗಳಿವೆ, ಆದರೆ ಈ ಸ್ವಚ್ಛತೆಯ ಬಗ್ಗೆ ಶಕ್ತಿಯನ್ನು ಏಕೆ ವ್ಯಯಿಸುತ್ತಿದ್ದಾರೆ ಎಂದು ಹೇಳಿದ್ದರು. ಕೆಲ ದಿನಗಳ ಹಿಂದೆ ವಿಶ್ವ ಅರೋಗ್ಯ ಸಂಸ್ಥೆಯ ವರದಿ ಬಂದಿದ್ದು ಅದರ ಪ್ರಕಾರ ಭಾರತದಲ್ಲಿ ಸ್ವಚ್ಛತಾ ಅಭಿಯಾನದ ಕಾರಣದಿಂದ 3 ಲಕ್ಷ ಮಕ್ಕಳು ಸಾವಿನಿಂದ ಪಾರಾಗಿದ್ದಾರೆ. ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಈ 3 ಲಕ್ಷ ಮಕ್ಕಳ ಜೀವ ಉಳಿಸಿದ ಕೀರ್ತಿ ಈ ಅಭಿಯಾನದ ಭಾಗವಾಗಿದ್ದ ಎಲ್ಲರಿಗೂ ಸೇರುತ್ತದೆ. 3 ಲಕ್ಷ ಬಡಮಕ್ಕಳ ಜೀವ ಉಳಿಸುವುದು ಎಂತಹ ದೊಡ್ಡ ಮಾನವೀಯತೆಯ ಕೆಲಸ! ವಿಶ್ವದೆಲ್ಲೆಡೆಯ ಸಂಸ್ಥೆಗಳು ಇದನ್ನು ಗುರುತಿಸುತ್ತಿವೆ.
ಸೋದರ ಸೋದರಿಯರೇ, ಮುಂದಿನ ವರ್ಷ ಮಹಾತ್ಮಾ ಗಾಂಧಿಯವರ 150ನೇ ಜಯಂತಿ ವರ್ಷ. ಪೂಜ್ಯ ಬಾಪೂರವರು ತಮ್ಮ ಜೀವನದಲ್ಲಿ ಸ್ವಾತಂತ್ರ್ಯಕ್ಕಿಂತಲೂ ಹೆಚ್ಚಿನ ಮಹತ್ವ ಸ್ವಚ್ಛತೆಗೆ ನೀಡಿದ್ದರು. "ಸ್ವಾತಂತ್ರ್ಯವು ಸತ್ಯಾಗ್ರಹಿಗಳ ಮೂಲಕ ಸಿಕ್ಕಿದ್ದರೆ, ಸ್ವಚ್ಛತೆಯು ಸ್ವಚ್ಛಾಗ್ರಹಿಗಳ ಮೂಲಕ ಸಿಗುತ್ತದೆ" ಎಂದು ಅವರು ಹೇಳುತ್ತಿದ್ದರು. ಗಾಂಧೀಜಿಯವರು ಸತ್ಯಾಗ್ರಹಿಗಳನ್ನು ತಯಾರು ಮಾಡಿದ್ದರು, ಮತ್ತು ಅವರ ಪ್ರೇರಣೆಯು ಸ್ವಚ್ಛಾಗ್ರಹಿಗಳನ್ನು ತಯಾರು ಮಾಡಿದೆ. ಮುಂದೆ ನಾವು ಬಾಪೂರವರ 150ನೇ ಜಯಂತಿಯನ್ನು ಆಚರಿಸುವಾಗ ಕೋಟಿ ಕೋಟಿ ಸ್ವಚ್ಛಾಗ್ರಹಿಗಳು ನಮ್ಮ ದೇಶವನ್ನು ಸ್ವಚ್ಛ ಭಾರತದ ರೂಪದಲ್ಲಿ ಪೂಜ್ಯ ಬಾಪೂರವರಿಗೆ ಕಾರ್ಯಾಂಜಲಿ ರೂಪದಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ಒಂದು ರೀತಿಯಲ್ಲಿ ನಾವು ಯಾವ ಕನಸನ್ನು ಹೊತ್ತು ನಡೆಯುತ್ತಿದ್ದೆವೋ ಆ ಕನಸನ್ನು ನನಸಾಗಿಸುತ್ತೇವೆ.
ನನ್ನ ಸೋದರ ಸೋದರಿಯರೇ, ಸ್ವಚ್ಛತೆಯು 3ಲಕ್ಷ ಮಕ್ಕಳ ಜೀವ ಉಳಿಸಿದೆ ಎನ್ನುವುದು ಒಳ್ಳೆಯ ವಿಷಯ. ಆದರೆ ಯಾವುದೇ ಮಧ್ಯಮ ವರ್ಗದ ಸುಖೀ ಪರಿವಾರವಾಗಲಿ,ಸಾಕಷ್ಟು ಸಂಬಳ ಪಡೆಯುವ ವ್ಯಕ್ತಿಯೇ ಆಗಿರಲಿ, ಬಡವನೇ ಆಗಿರಲಿ, ಒಂದು ಸಾರಿ ಮನೆಯಲ್ಲಿ ರೋಗವು ಆವರಿಸಿದರೆ ವ್ಯಕ್ತಿಯಷ್ಟೇ ಅಲ್ಲ, ಅವನ ಇಡೀ ಕುಟುಂಬವೇ ರೋಗಪೀಡಿತರಾಗುತ್ತಾರೆ, ಮುಂದಿನ ತಲೆಮಾರುಗಳು ರೋಗದ ಚಕ್ರವ್ಯೂಹದಲ್ಲಿ ಸಿಕ್ಕಿಕೊಳ್ಳುತ್ತದೆ.
ಹೀಗಾಗಿ ಭಾರತ ಸರ್ಕಾರ ಪ್ರಧಾನಮಂತ್ರಿ ಜನ ಆರೋಗ್ಯ ಅಭಿಯಾನ ಆರಂಭಿಸಲು ನಿರ್ಧರಿಸಿದೆ. ಆ ಮೂಲಕ ಬಡ ಜನರು, ಶ್ರೀಸಾಮಾನ್ಯರು ಗಂಭೀರ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ ಅಲ್ಲದೆ ದೊಡ್ಡ ದೊಡ್ಡ ಆಸ್ಪತ್ರೆಗಳಿಗೂ ಉಚಿತವಾಗಿ ದಾಖಲಾಗಬಹುದಾಗಿದೆ. ಪ್ರಧಾನಮಂತ್ರಿ ಜನ ಆರೋಗ್ಯ ಅಭಿಯಾನ ಮತ್ತು ಆಯುಷ್ಮಾನ್ ಭಾರತ ಯೋಜನೆ ಗಳು ದೇಶದ 10 ಕೋಟಿ ಕುಟುಂಬಗಳನ್ನು ತಲುಪುತ್ತದೆ. ಮುಂದಿನ ದಿನಗಳಲ್ಲಿ ಕೆಳ ಮಧ್ಯಮ ವರ್ಗ, ಮಧ್ಯಮ ವರ್ಗ ಮತ್ತು ಮೇಲ್ಮಧ್ಯಮ ವರ್ಗದವರಿಗೂ ಇದರಿಂದ ಅನುಕೂಲ ಆಗಲಿದೆ. 10 ಕೋಟಿ ಕುಟುಂಬಗಳಿಗೆ ಅಂದರೆ, ಸುಮಾರು 50 ಕೋಟಿ ನಾಗರಿಕರಿಗೆ ಪ್ರಯೋಜನ ಆಗಲಿದ್ದು, ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5ಲಕ್ಷ ರೂಪಾಯಿಗಳ ಅರೋಗ್ಯ ವಿಮೆಯನ್ನು ನೀಡುವ ಯೋಜನೆ ಇದಾಗಿದೆ.. ಇದನ್ನು ನಾವು ಈ ದೇಶದ ನಾಗರಿಕರಿಗೆ ಕೊಡುತ್ತಿದ್ದೇವೆ. ಇದು ತಂತ್ರಜ್ಞಾನ ಚಾಲಿತ ವ್ಯವಸ್ಥೆಯಾಗಿದೆ. ವ್ಯವಸ್ಥೆಯು ಪಾರದರ್ಶಕವಾಗಿರಲು, ಯಾವುದೇ ಸಾಮಾನ್ಯ ವ್ಯಕ್ತಿಗೆ ಈ ಅವಕಾಶವನ್ನು ಉಪಯೋಗಿಸಲು ತೊಂದರೆಯಾಗದಿರಲು, ಅಡಚಣೆಗಳು ಉಂಟಾಗದಂತಿರಲು ತಂತ್ರಜ್ಞಾನದ ಉಪಯೋಗ ಬಹಳ ಮುಖ್ಯ. ಇದಕ್ಕೋಸ್ಕರ ತಾಂತ್ರಿಕ ಸಾಧನಗಳು ರೂಪುಗೊಳ್ಳುತ್ತಿವೆ.
ಇಂದಿನಿಂದ ಮುಂದಿನ 4, 5, 6 ವಾರಗಳಲ್ಲಿ ದೇಶದ ಬೇರೆ ಬೇರೆ ಮೂಲೆಗಳಲ್ಲಿ ಈ ತಂತ್ರಜ್ಞಾನವು ಪರೀಕ್ಷಾರ್ಥ ಪ್ರಯೋಗಕ್ಕೆ ಒಳಪಡುತ್ತಿದೆ. ಇದನ್ನು ಸಂಪೂರ್ಣವಾಗಿ ಪಾರದರ್ಶಕವಾಗಿ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಮತ್ತು ಈ ಯೋಜನೆಯನ್ನು ಮುಂದುವರೆಸಲು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನವಾದ ಸೆಪ್ಟೆಂಬರ್ 25 ರಂದು ಇಡೀ ದೇಶದಲ್ಲಿ ಪ್ರಧಾನಮಂತ್ರಿ ಜನಾರೋಗ್ಯ ಅಭಿಯಾನವನ್ನು ಜಾರಿಗೊಳಿಸಲಾಗುವುದು. ಇದರ ಪರಿಣಾಮ - ದೇಶದ ಬಡ ವ್ಯಕ್ತಿಗೆ ರೋಗದ ಸಂಕಷ್ಟದಲ್ಲಿ ಒದ್ದಾಡುವ ಪರಿಸ್ಥಿತಿ ಬರುವುದಿಲ್ಲ. ಅವನಿಗೆ ಶ್ರೀಮಂತರಿಂದ ಸಾಲ ಪಡೆಯುವ ಪ್ರಮೇಯ ಬರುವುದಿಲ್ಲ. ಅವನ ಕುಟುಂಬವು ಬೀದಿಗೆ ಬೀಳುವುದಿಲ್ಲ. ದೇಶದಲ್ಲಿ ಕೂಡ ಮಧ್ಯಮ ವರ್ಗದ ಕುಟುಂಬಗಳಿಗೆ, ನವಯುವಕರಿಗೆ, ಅರೋಗ್ಯ ಕ್ಷೇತ್ರದಲ್ಲಿ ಹೊಸ ಅವಕಾಶಗಳು ದೊರೆಯುತ್ತವೆ. 2ನೇ ಮತ್ತು 3 ನೇ ಹಂತದ ನಗರಗಳಲ್ಲಿ ಹೊಸ ಆಸ್ಪತ್ರೆಗಳು ಪ್ರಾರಂಭವಾಗುತ್ತವೆ. ದೊಡ್ಡ ಪ್ರಮಾಣದಲ್ಲಿ ವೈದ್ಯಕೀಯ ಸಿಬ್ಬಂದಿ ಬೇಕಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಾವಕಾಶಗಳು ಹುಟ್ಟಿಕೊಳ್ಳುತ್ತವೆ.
ಸೋದರ ಸೋದರಿಯರೇ, ಯಾರೊಬ್ಬರೂ ಬಡತನದಲ್ಲಿ ಜೀವಿಸಲು ಇಷ್ಟ ಪಡುವುದಿಲ್ಲ, ಯಾವುದೇ ಬಡವನೂ ಬಡತನದಲ್ಲಿಯೇ ಮರಣ ಹೊಂದಲು ಇಚ್ಚಿಸುವುದಿಲ್ಲ. ಯಾವುದೇ ಬಡವನೂ ತನ್ನ ಮಕ್ಕಳಿಗೆ ಬಡತನವನ್ನು ಪರಂಪರೆಯಾಗಿ ನೀಡಿ ಹೋಗಲು ಇಷ್ಟ ಪಡುವುದಿಲ್ಲ. ಆತ ಜೀವನ ಪೂರ್ತಿ ಬಡತನದಿಂದ ಹೊರಬರಲು ಚಡಪಡಿಸುತ್ತಿರುತ್ತಾನೆ. ಈ ಸಂಕಟದಿಂದ ಹೊರತರಲು ಬಡವರ ಸಬಲೀಕರಣ ಮಾಡುವುದೇ ಇದಕ್ಕಿರುವ ಉಪಾಯ ಮತ್ತು ಸೂಕ್ತ ಚಿಕಿತ್ಸೆ.
ನಾವು ಕಳೆದ 4 ವರ್ಷಗಳಲ್ಲಿ ಬಡವರನ್ನು ಸಬಲೀಕರಿಸುವ ನಿಟ್ಟಿನಲ್ಲಿ ಒತ್ತು ನೀಡಿದ್ದೇವೆ. ಬಡವರು ಸಶಕ್ತನಾಗಿರಲಿ ಎನ್ನುವುದೇ ನಮ್ಮ ಪ್ರಯತ್ನವಾಗಿದೆ. ಇತ್ತೀಚಿಗೆ ಒಂದು ಅಂತಾರಾಷ್ಟ್ರೀಯ ಸಂಸ್ಥೆಯು ಒಂದು ಒಳ್ಳೆಯ ವರದಿಯನ್ನು ನೀಡಿದೆ. ಕಳೆದ 2 ವರ್ಷಗಳಲ್ಲಿ ಭಾರತದ 5 ಕೋಟಿ ಬಡವರು ಬಡತನದ ರೇಖೆಯಿಂದ ಮೇಲೆ ಬಂದಿದ್ದಾರೆ ಎಂದು ಅದು ಹೇಳಿದೆ.
ಸೋದರ ಸೋದರಿಯರೇ, ನಾವು ಯಾವಾಗ ಬಡವರ ಸಬಲೀಕರಣದ ಕೆಲಸ ಮಾಡುತ್ತೇವೆಯೋ ಮತ್ತು ನಾನು ಅಯುಷ್ಮಾನ್ ಭಾರತದ ಬಗ್ಗೆ ಮಾತನಾಡಿದಾಗ 10 ಕೋಟಿ ಕುಟುಂಬಗಳು ಅಂದರೆ 50 ಕೋಟಿ ಜನರು! ಇದು ಎಷ್ಟು ದೊಡ್ಡ ಯೋಜನೆಯೆಂದು ಬಹಳ ಕಡಿಮೆ ಜನರಿಗೆ ತಿಳಿದಿರಬಹುದು. ಒಂದು ವೇಳೆ ನಾವು ಅಮೇರಿಕಾ, ಕೆನಡಾ,ಮೆಕ್ಸಿಕೋ ಇವುಗಳ ಜನಸಂಖ್ಯೆಯನ್ನು ಕೂಡಿದರೆ ಎಷ್ಟು ಆಗುತ್ತದೆಯೋ ಅಷ್ಟು ಜನರು ಈ ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಒಂದು ವೇಳೆ ನಾನು ಇಡೀ ಯೂರೋಪ್ ನ ಜನಸಂಖ್ಯೆಯನ್ನು ಲೆಕ್ಕ ಹಾಕಿದರೆ ಹೆಚ್ಚು ಕಡಿಮೆ ಅಷ್ಟೇ ಜನರು ಭಾರತದಲ್ಲಿ ಆಯುಷ್ಮಾನ್ ಭಾರತ್ ನ ಫಲಾನುಭವಿಗಳಾಗಲಿದ್ದಾರೆ.
ಸೋದರ ಸೋದರಿಯರೇ, ಬಡವರನ್ನು ಸಬಲೀಕರಿಸಲು ನಾವು ಅನೇಕ ಯೋಜನೆಗಳನ್ನು ರೂಪಿಸಿದ್ದೇವೆ. ಯೋಜನೆಗಳಂತೂ ಆಗುತ್ತವೆ, ಆದರೆ ಮಧ್ಯವರ್ತಿಗಳು ಅದರ ಲಾಭವನ್ನು ಪಡೆಯುತ್ತಾರೆ. ಬಡವರಿಗೆ ತಮ್ಮ ಹಕ್ಕು ಸಿಗುವುದಿಲ್ಲ, ಖಜಾನೆಯಿಂದ ಹಣ ಸೋರಿಹೋಗುತ್ತದೆ, ಯೋಜನೆಗಳು ಕಾಗದದಲ್ಲಿ ಕಾಣಿಸುತ್ತವೆ, ದೇಶವು ಲೂಟಿಗೊಳಗಾಗುತ್ತದೆ. ಸರ್ಕಾರವು ಕಣ್ಣು ಮುಚ್ಚಿ ಕುಳಿತುಕೊಳ್ಳಲಾಗುವುದಿಲ್ಲ. ನಾನಂತೂ ಖಂಡಿತವಾಗಿಯೂ ಕುಳಿತುಕೊಳ್ಳಲಾರೆ.
ಸೋದರ ಸೋದರಿಯರೇ , ಆದುದರಿಂದ, ನಮ್ಮ ವ್ಯವಸ್ಥೆಯಲ್ಲಿ ಬರುವ ವಿಕೃತಿಗಳನ್ನು ಕೊನೆಗಾಣಿಸಿ ಸಾಮಾನ್ಯ ಮಾನವನ ಮನದಲ್ಲಿ ವಿಶ್ವಾಸ ಹುಟ್ಟಿಸುವುದು ಬಹಳ ಅವಶ್ಯಕ. ಹೊಣೆಗಾರಿಕೆ ಹೊತ್ತಿರುವ ರಾಜ್ಯವಾಗಲಿ, ಕೇಂದ್ರವಾಗಲಿ, ಸ್ಥಳೀಯ ಸ್ವತಂತ್ರ ಸಂಸ್ಥೆಗಳಾಗಲಿ, ನಾವೆಲ್ಲರೂ ಒಟ್ಟಾಗಿ ನಿಭಾಯಿಸಬೇಕು ಮತ್ತು ಇದನ್ನು ಮುನ್ನಡೆಸಿಕೊಂಡು ಹೋಗಬೇಕು. ಯಾವಾಗಿನಿಂದ ನಾವು ಸ್ವಚ್ಛತಾ ಅಭಿಯಾನದಲ್ಲಿ ತೊಡಗಿದ್ದೇವೆಯೋ, ಆಗಿನಿಂದ ಸೋರುವಿಕೆಯನ್ನು ತಡೆಗಟ್ಟುವುದರಲ್ಲಿ ತೊಡಗಿದ್ದೇವೆ. ಎಂದು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಯಾರೋ ಉಜ್ವಲಾ ಯೋಜನೆಯ ಫಲಾನುಭವಿಗಳಾಗಿರುತ್ತಿದ್ದರು, ಅನಿಲ ಸಂಪರ್ಕದ ಫಲಾನುಭವಿಗಳು, ಡೂಪ್ಲಿಕೇಟ್ ಅನಿಲ ಸಂಪರ್ಕಹೊಂದಿದ್ದವರು, ಇನ್ಯಾರೋ ಪಡಿತರ ಚೀಟಿಯ ಫಲಾನುಭವಿ, ಮತ್ತಿನ್ಯಾರೋ ವಿದ್ಯಾರ್ಥಿವೇತನದ ಫಲಾನುಭವಿ, ಮಗದೊಬ್ಬ ಪಿಂಚಣಿ ಫಲಾನುಭವಿ - ಹೀಗೆ;ಸವಲತ್ತು ಅವರಿಗೆ ಸಿಗುತ್ತಿತ್ತು. ಆದರೆ ಯಾರು ಹುಟ್ಟೇ ಇಲ್ಲವೋ, ಯಾರ ಹೆಸರೇ ಇಲ್ಲವೋ ಅಂತಹ 6 ಕೋಟಿ ಜನಗಳಿಗೆ ಹಣವು ಹೋಗುತ್ತಿತ್ತು. ಈ 6 ಕೋಟಿ ಹೆಸರುಗಳನ್ನು ತೆಗೆಯುವುದು ಎಂತಹ ಕಷ್ಟದ ಕೆಲಸವಿದ್ದಿರಬಹುದು? ಎಷ್ಟು ಜನರಿಗೆ ಇದರಿಂದ ತೊಂದರೆಯಾಗಿರಬಹುದು? ಯಾವ ವ್ಯಕ್ತಿಯು ಜನಿಸಿಯೇ ಇಲ್ಲವೋ, ಈ ಭೂಮಿಯ ಮೇಲೆಯೇ ಇಲ್ಲವೋ ಇಂತಹ ಸುಳ್ಳು ಹೆಸರುಗಳು ಬರೆಸಿ ಹಣ ದೋಚಲಾಗುತ್ತಿತ್ತು. ಈ ಸರ್ಕಾರವು ಇದನ್ನು ತಡೆಗಟ್ಟಿದೆ. ಭ್ರಷ್ಟಾಚಾರ, ಕಪ್ಪು ಹಣ ಈ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ನಾವು ಹೆಜ್ಜೆ ಇಟ್ಟಿದ್ದೇವೆ.
ಸೋದರ ಸೋದರಿಯರೇ, ಇದರ ಪರಿಣಾಮ ಏನಾಗಿದೆ? ಸುಮಾರು 9೦ ಸಾವಿರ ಕೋಟಿ ರೂಪಾಯಿಯಷ್ಟು ಉಳಿತಾಯವಾಗಿದೆ- ಇದು ಸಣ್ಣ ಮೊತ್ತವಲ್ಲ, 9೦ ಸಾವಿರ ಕೋಟಿ ಹಣ ಅಡ್ಡ ದಾರಿಗಳಿಂದ, ವಂಚನೆಯ ಮೂಲಕ ಮೋಸಗಾರರ ಕೈಗಳಿಗೆ ಹೋಗುತ್ತಿತ್ತೋ ಅದು ಇಂದು ದೇಶದ ಖಜಾನೆಯಲ್ಲಿ ಭದ್ರವಾಗಿದೆ ಮತ್ತು ಅದು ದೇಶದ ಸಾಮಾನ್ಯ ಜನರ ಒಳ್ಳೆಯ ಕೆಲಸಕ್ಕೋಸ್ಕರ ಉಪಯೋಗವಾಗುತ್ತಿದೆ.
ಸೋದರ ಸೋದರಿಯರೇ, ಈ ರೀತಿ ಯಾಕಾಗುತ್ತದೆ? ಈ ದೇಶವು ಬಡವರ ಏಳಿಗೆಗೆ ಕೆಲಸ ಮಾಡುವ ದೇಶ. ನಮ್ಮ ದೇಶದ ಬಡವರು ಗೌರವದಿಂದ ಬಾಳಲಿ ಎನ್ನುವ ಉದ್ದೇಶಕ್ಕಾಗಿ ಕೆಲಸ ಮಾಡಬೇಕಾಗಿದೆ. ಆದರೆ ಈ ಮಧ್ಯವರ್ತಿಗಳು ಏನು ಮಾಡುತ್ತಿದ್ದರೆಂದರೆ? ಮಾರುಕಟ್ಟೆಯಲ್ಲಿ ಗೋಧಿಯ ಬೆಲೆ 24 ರಿಂದ 25 ರೂಪಾಯಿಗಳು ಎಂದು ನಿಮಗೆ ಗೊತ್ತಿರಬಹುದು. ಆದರೆ ಆ ಬೆಲೆಗೆ ಅದೇ ಗೋಧಿಯನ್ನು ಸರ್ಕಾರವು ಖರೀದಿಸಿ ರೇಷನ್ ಕಾರ್ಡ್ ಮುಖಾಂತರ ಕೇವಲ 2 ರೂಪಾಯಿಗೆ ಬಡವನಿಗೆ ನೀಡುತ್ತಿದೆ. ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ 30 ರಿಂದ 32 ರೂಪಾಯಿಗಳು. ಆದರೆ ಬಡವರಿಗೆ ಅಕ್ಕಿ ಸಿಗಲಿ ಎನ್ನುವ ಕಾರಣದಿಂದ ಸರ್ಕಾರವು 3 ರೂಪಾಯಿಗೆ ರೇಷನ್ ಕಾರ್ಡ್ ಹೊಂದಿರುವ ಬಡವರಿಗೆ ನೀಡುತ್ತಿದೆ. ಅಂದರೆ ಯಾರಾದರೂ 1 ಕೆಜಿ ಗೋಧಿಯನ್ನು ನಕಲಿ ಹೆಸರಿನಲ್ಲಿ ಪಡೆದುಕೊಂಡರೆ ಅದರಿಂದ ಅವನಿಗೆ 20 ರಿಂದ 25 ರೂಪಾಯಿಗಳು ಹಾಗೆಯೇ ಸಿಗುತ್ತದೆ. ಅದೇ ರೀತಿ ಒಂದು ಕಿಲೋ ಅಕ್ಕಿಗೆ 30 ರಿಂದ 35 ರೂಪಾಯಿ ಸಿಗುತ್ತದೆ. ಇದೇ ಕಾರಣದಿಂದ ಈ ನಕಲಿ ಹೆಸರುಗಳಿಂದ ಈ ವ್ಯವಹಾರಗಳು ನಡೆಯುತ್ತಿದ್ದವು. ಯಾವಾಗ ಬಡವರು ಪಡಿತರ ಅಂಗಡಿಗೆ ಹೋಗುತ್ತಿದ್ದರೋ ಆಗ ಅವರು ರೇಷನ್ ಖಾಲಿಯಾಗಿದೆ ಎಂದು ಹೇಳುತ್ತಿದ್ದರು. ರೇಷನ್ ಅಲ್ಲಿಂದ ಹೊರಬಂದು ಬೇರೆ ಅಂಗಡಿಗೆ ತಲುಪುತ್ತಿತ್ತು. ಆ 2 ರೂಪಾಯಿಗಳಿಗೆ ಸಿಗುವ ರೇಷನ್ ನನ್ನು ಬಡವರು 20 ರಿಂದ 25 ರೂಪಾಯಿ ಕೊಟ್ಟು ಖರೀದಿಸಬೇಕಾಗುತ್ತಿತ್ತು. ಬಡವರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿತ್ತು. ಹೀಗಾಗಿ ಈ ನಕಲಿ ವ್ಯವಹಾರಗಳನ್ನು ತಲೆಕೆಳಗು ಮಾಡಲಾಗಿದೆ.
ಸೋದರ ಸೋದರಿಯರೇ, ನಮ್ಮ ದೇಶದ ಕೋಟಿ ಕೋಟಿ ಬಡವರಿಗೆ 2 ಅಥವಾ 3 ರೂಪಾಯಿಯಲ್ಲಿ ಊಟ ಸಿಗುತ್ತಿದೆ. ಸರ್ಕಾರವು ಅದಕ್ಕಾಗಿ ಬಹಳಷ್ಟು ಹಣ ಖರ್ಚು ಮಾಡುತ್ತಿದೆ. ಆದರೆ, ಇದರ ಮನ್ನಣೆ ಸರ್ಕಾರಕ್ಕೆ ಸಿಗುವುದಿಲ್ಲ. ನಾನು ವಿಶೇಷವಾಗಿ ನನ್ನ ದೇಶದ ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಹೇಳಲು ಬಯಸುವುದೇನೆಂದರೆ,ಇಂದು ಮಧ್ಯಾಹ್ನ ನೀವು ಊಟ ಮಾಡಿ ಮುಗಿಸಿದಾಗ ಸ್ವಲ್ಪ ಸಮಯ ಕುಟುಂಬದವರ ಜೊತೆ ಕುಳಿತು ನನ್ನ ಮಾತುಗಳನ್ನು ನೆನಪಿಸಿಕೊಳ್ಳಿ. ನಾನು ಇಂದು ಪ್ರಾಮಾಣಿಕ ತೆರಿಗೆದಾರರ ಹೃದಯ ಸ್ಪರ್ಶಿಸಲು ಇಚ್ಚಿಸುತ್ತೇನೆ. ಅವರ ಮನಸ್ಸಿನ ದೇಗುಲದಲ್ಲಿ ನಮಸ್ಕರಿಸಲು ಹೋಗುತ್ತಿದ್ದೇನೆ. ನನ್ನ ದೇಶವಾಸಿಗಳೇ, ಯಾರು ಪ್ರಾಮಾಣಿಕ ತೆರಿಗೆದಾರರಾಗಿರುತ್ತಾರೋ ಅವರು ತೆರಿಗೆ ನೀಡುತ್ತಾರೆ. ಯಾವ ಪ್ರಾಮಾಣಿಕ ವ್ಯಕ್ತಿಗಳು ತೆರಿಗೆ ಪಾವತಿಸುತ್ತಾರೋ ಆ ಹಣದಲ್ಲಿ ಈ ಯೋಜನೆಗಳು ನಡೆಯುತ್ತವೆ ಎನ್ನುವ ಆಶ್ವಾಸನೆಯನ್ನು ನಿಮಗೆ ನೀಡುತ್ತಿದ್ದೇನೆ. ಈ ಯೋಜನೆಯ ಪುಣ್ಯವು ಯಾರಿಗಾದರೂ ಸಿಗುತ್ತದೆ ಎನ್ನುವುದಾದರೆ ಅದು ಸರ್ಕಾರಕ್ಕಲ್ಲ, ನನ್ನ ಪ್ರಾಮಾಣಿಕ ತೆರಿಗೆದಾರರಿಗೆ ಸಿಗುತ್ತದೆ. ಆದ್ದರಿಂದ ನೀವು ಯಾವಾಗ ಊಟ ಮಾಡಲು ಕುಳಿತುಕೊಳ್ಳುವಿರೋ ಆಗ ನೀವು ಕೊಡುವ ತೆರಿಗೆ ಹಣದಿಂದ 3 ಬಡ ಕುಟುಂಬಗಳೂ ಕೂಡ ಊಟ ಮಾಡುತ್ತಿವೆ ಎನ್ನುವುದನ್ನು ವಿಶ್ವಾಸದಿಂದ ನೆನಪಿಸಿಕೊಳ್ಳಿ. ಬಡವರ ಹೊಟ್ಟೆ ತುಂಬುತ್ತದೆ ಹಾಗೂ ಇದರ ಪುಣ್ಯ ಪ್ರಾಮಾಣಿಕ ತೆರಿಗೆದಾರರಿಗೆ ದೊರೆಯುತ್ತದೆ.
ಸ್ನೇಹಿತರೇ, ದೇಶದಲ್ಲಿ ತೆರಿಗೆ ಕಟ್ಟದೆ ಇರುವ ವಾತಾವರಣವನ್ನು ನಿರ್ಮಿಸಲಾಗುತ್ತಿದೆ. ತೆರಿಗೆದಾರನು ಮನೆಯಲ್ಲೇ ಕುಳಿತಿರಲಿ, ಹವಾನಿಯಂತ್ರಿತ ಕೊಠಡಿಯಲ್ಲಿಯೇ ಇರಲಿ,ಆದರೆ ಅವನಿಗೆ ತನ್ನ ತೆರಿಗೆಯಿಂದ 3 ಬಡ ಕುಟುಂಬಗಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿವೆ ಎನ್ನುವ ವಿಷಯ ಗೊತ್ತಾದರೆ ಇದಕ್ಕಿಂತ ಸಂತೋಷ ಜೀವನದಲ್ಲಿ ಏನಿದ್ದೀತು?ಅದಕ್ಕಿಂತ ಪುಣ್ಯದ ಕೆಲಸ ಏನಿರಬಹುದು? ಸೋದರ ಸೋದರಿಯರೇ ಇಂದು ದೇಶವು ಪ್ರಾಮಾಣಿಕತೆಯ ಉತ್ಸವವನ್ನು ಆಚರಿಸುತ್ತಾ ಮುನ್ನಡೆಯುತ್ತಿದೆ. 2013ನೇ ಇಸವಿವರೆಗೆ ದೇಶದಲ್ಲಿ ತೆರಿಗೆ ಪಾವತಿದಾರರ ಸಂಖ್ಯೆ 4 ಕೋಟಿಯಷ್ಟಿತ್ತು ಇದು ನಮ್ಮ ದೇಶದಲ್ಲಿ ಕಳೆದ 70 ವರ್ಷಗಳಲ್ಲಿ ನಡೆಯುತ್ತಿದ್ದ ರೀತಿಯನ್ನು ತೋರಿಸುತ್ತದೆ. ಅಂದರೆ ದೇಶದಲ್ಲಿ ನೇರ ತೆರಿಗೆ ಪಾವತಿದಾರರ ಸಂಖ್ಯೆ ಕೇವಲ 4 ಕೋಟಿಯಷ್ಟಿತ್ತು. ಆದರೆ, ನೇರ ತೆರಿಗೆ ಪಾವತಿದಾರರ ಸಂಖ್ಯೆ ಕೇವಲ ನಾಲ್ಕು ವರ್ಷಗಳಲ್ಲಿ ಸರಿಸುಮಾರು ಎರಡುಪಟ್ಟು ಅಂದರೆ ಆರು ಮುಕ್ಕಾಲು ಕೋಟಿ ಆಗಿದೆ. 3, 3.5 ಅಥವಾ ಮೂರೂ ಮುಕ್ಕಾಲು ಕೋಟಿ ಎಲ್ಲಿ?- ಆರೂ ಮುಕ್ಕಾಲು ಕೋಟಿ ಎಲ್ಲಿ? ಇದು ಪ್ರಾಮಾಣಿಕತೆಯ ಜೀವಂತ ಉದಾಹರಣೆ. ದೇಶ ಪ್ರಾಮಾಣಿಕತೆಯೆಡೆಗೆ ದಾಪುಗಾಲು ಇಟ್ಟಿರುವುದರ ಉದಾಹರಣೆ ಇದಾಗಿದೆ.
ನಮ್ಮ ದೇಶದಲ್ಲಿ 70 ವರ್ಷಗಳಲ್ಲಿ ಪರೋಕ್ಷ ತೆರಿಗೆ ಕಟ್ಟುವ ಉದ್ಯಮಿಗಳು ಎಷ್ಟು ಜನ ಇದ್ದರೋ ಅವರಲ್ಲಿ ಕೇವಲ 70ಲಕ್ಷಗಳ ಗುರಿ ಮಟ್ಟಿತ್ತು. ಆದರೆ ಜಿ.ಎಸ್.ಟಿ. ಬಂದ ಮೇಲೆ ಕೇವಲ ಒಂದು ವರ್ಷದಲ್ಲಿ 70ಲಕ್ಷಗಳ ಈ ಸಂಖ್ಯೆ ಒಂದು ಕೋಟಿ-ಹದಿನಾರು ಲಕ್ಷಗಳನ್ನು ದಾಟಿದೆ. ನನ್ನ ಸಹೋದರ ಸಹೋದರಿಯರೇ, ನಮ್ಮ ದೇಶದ ನಾಗರಿಕರು ಇಂದು ಪ್ರಾಮಾಣಿಕತೆಯ ಉತ್ಸವವದಲ್ಲಿ ಪಾಲ್ಗೊಳ್ಳಲು ಮುಂದೆ ಬರುತ್ತಿದ್ದಾರೆ. ಈ ರೀತಿ ಮುಂದೆ ಬರುತ್ತಿರುವವರಿಗೆ ನಾನು ವಂದಿಸುತ್ತೇನೆ. ಮುಂದೆ ನಾನೂ ಸಹ ತೆರಿಗೆ ಪಾವತಿಯಲ್ಲಿ ಕೈಜೋಡಿಸಬೇಕು ಎಂದು ಬಯಸುವವರಿಗೆ, ನಾನು ’ತೆರಿಗೆ ಪಾವತಿಸುವವರಿಗೆ ದೇಶದಲ್ಲಿ ಗೌರವಪೂರ್ಣ ಬದುಕನ್ನು ನಡೆಸುವ ಅವಕಾಶ ನೀಡುವುದಕ್ಕೆ ಸರ್ಕಾರ ಬದ್ಧವಾಗಿದೆ’ಎಂಬ ಬಗ್ಗೆ ಭರವಸೆ ಕೊಡುತ್ತೇನೆ. ತೆರಿಗೆ ಕಟ್ಟುತ್ತಿರುವವರು ನಿಜವಾಗಿ ದೇಶವನ್ನು ಮುನ್ನಡೆಸುವುದಕ್ಕೆ ಪ್ರೇರಕರಾಗಿದ್ದಾರೆ ಎಂಬ ವಿಶ್ವಾಸವನ್ನು ದೃಢಪಡಿಸುತ್ತೇನೆ. ’ನಿಮ್ಮ ಆತಂಕ-ನಮ್ಮ ಆತಂಕ’ ನಾವು ನಿಮ್ಮ ಜೊತೆ ಇದ್ದೇವೆ. ಏಕೆ ಎಂದರೆ, ನಿಮ್ಮ ಕೊಡುಗೆಯಿಂದಲೇ ದೇಶ ಮುನ್ನಡೆಯಲು ಸಾಧ್ಯ ಎಂಬುದನ್ನು ನಾವು ಗಮನಿಸಿದ್ದೇವೆ.ಆದ್ದರಿಂದ ನಾವು ಕಾಳಧನ ಮತ್ತು ಭ್ರಷ್ಟಾಚಾರವನ್ನು ಕ್ಷಮಿಸುವುದೇ ಇಲ್ಲ. ಎಷ್ಟೇ ಕಷ್ಟ ಬರಲಿ, ಈ ಮಾರ್ಗವನ್ನು ನಾನು ಬಿಡುವ ಪ್ರಶ್ನೆಯೇ ಇಲ್ಲ. ಈ ದೇಶವನ್ನು ಈ ಸಮಸ್ಯೆಗಳು ಗೆದ್ದಲಿನ ತರಹ ಆಕ್ರಮಿಸಿಬಿಟ್ಟಿವೆ. ನೀವೆಲ್ಲಾ ಗಮನಿಸಿರಬಹುದು, ದೆಹಲಿಯ ಗಲ್ಲಿಗಳಲ್ಲಿ ಪವರ್ ದಲ್ಲಾಳಿಗಳು ಕಣ್ಣಿಗೆ ಬೀಳುತ್ತಿಲ್ಲ.
ನನ್ನ ಪ್ರೀತಿಯ ದೇಶವಾಸಿಗಳೇ, ಕಾಲ ಬದಲಾಗಿದೆ. ಕೆಲವರು ಮನೆಯಲ್ಲಿ ಕುಳಿತು ಮಾತನಾಡ್ತಾ ಇದ್ರು. ಸರ್ಕಾರದ ಆ ನೀತಿ-ಈ ನೀತಿಗಳೆಲ್ಲಾ ಮೂಲೆ ಸೇರುತ್ತವೆ. ಅವೆಲ್ಲವನ್ನೂ ಅಳಿಸಿಹಾಕುತ್ತೇವೆ ಅಂತ. ಆದರೆ ಅವೆಲ್ಲವೂ ಕೂಡ ಇಂದು ಅಂತ್ಯ ಕಂಡಿವೆ. ಅವರೆಲ್ಲರ ಮಾತುಗಳಿಗೂ ಬೆಲೆಯಿಲ್ಲದಂತಾಗಿದೆ. ಲಂಚ ಪಡೆಯುವವರ ವಿರುದ್ಧ ಕ್ರಮ ಕೈಗೊಳ್ಳುವ ರೀತಿ ಕಠೋರವಾಗಿದೆ. ಸುಮಾರು ಮೂರು ಲಕ್ಷ ನಕಲಿ ಕಂಪೆನಿಗಳಿಗೆ ಬೀಗಮುದ್ರೆ ಬಿದ್ದಿದೆ. ಇದು ಕಡಿಮೆ ಸಂಖ್ಯೆಯೇನಲ್ಲ. ಅದರ ನಿರ್ದೇಶಕರ ಮೇಲೆ ನಿರ್ಬಂಧ ವಿಧಿಸಲಾಗಿದೆ. ನಾವು ನಮ್ಮ ಎಲ್ಲಾ ಪ್ರಕ್ರಿಯೆಗಳನ್ನೂ ಪಾರದರ್ಶಕವನ್ನಾಗಿ ಮಾಡಲು, ಆನ್-ಲೈನ್ ವ್ಯವಸ್ಥೆಯನ್ನು ಜಾರಿಗೊಳಿಸಿದ್ದೇವೆ. ನಾವು ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡಿದ್ದೇವೆ. ಇದರಿಂದಾಗಿ ಎಂತಹ ಅನುಕೂಲಕರ ಪರಿಸ್ಥಿತಿ ಉಂಟಾಗಿದೆ ಎಂದರೆ, ಪರಿಸರದ ಕಾರ್ಯಗಳಿಗೆ ಬೇಕಾಗುವ ಅಮುಮತಿಯನ್ನು,ಅನುಮೋದನೆಯನ್ನು ಪಡೆಯೋದಿಕ್ಕೆ, ಭ್ರಷ್ಟಾಚಾರದ ಬೆಟ್ಟವನ್ನೇ ಹತ್ತಿ ಇಳಿಯಬೇಕಾಗಿತ್ತು. ಆಗ ಅನುಮತಿ ಸಿಗುತ್ತಿತ್ತು. ನಾವೀಗ ಅನುಮತಿಯನ್ನು ಆನ್-ಲೈನ್ ಮಾಡಿದ್ದೇವೆ. ಪಾರದರ್ಶಕಗೊಳಿಸಿದ್ದೇವೆ. ಯಾವುದೇ ವ್ಯಕ್ತಿ ಇದನ್ನು ಗಮನಿಸಿಬಹುದು. ಭಾರತದ ಸಂಪನ್ಮೂಲವನ್ನು ವಿವೇಚನಾಯುಕ್ತವಾಗಿ ಬಳಕೆ ಮಾಡಿಕೊಳ್ಳುವಲ್ಲಿ ನಾವು ಸರಿಯಾದ ರೀತಿಯಲ್ಲಿ ಕೆಲಸ ಮಾಡಬಹುದಾಗಿದೆ. ಇಂದು ನಮ್ಮ ದೇಶದಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ವಿಚಾರ ಇನ್ನೊಂದಿದೆ. ನಮ್ಮ ಸರ್ವೋಚ್ಚ ನ್ಯಾಯಾಲಯದಲ್ಲಿ ಮೂರು ಮಹಿಳೆಯರು ನ್ಯಾಯಪೀಠದಲ್ಲಿ ಕುಳಿ ಕುಳಿತು ನ್ಯಾಯದಾನ ಮಾಡುತ್ತಿದ್ದಾರೆ. ಸ್ವಾತಂತ್ರ್ಯದ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಕೂಡ ಗರಿಷ್ಠ ಮಹಿಳಾ ಸಚಿವರ ಪ್ರಾತಿನಿಧ್ಯವಿದೆ.
ಪ್ರೀತಿಯ ದೇಶವಾಸಿಗಳೇ, ಈ ಸಂದರ್ಭದಲ್ಲಿ ಇಂದು ನಾನು ಶೌರ್ಯಶಾಲಿ ಪುತ್ರಿಯರೊಂದಿಗೆ ಇನ್ನೊಂದು ಹೆಮ್ಮೆಯ ವಿಚಾರವನ್ನು ಹಂಚಿಕೊಳ್ಳಬಯಸುತ್ತೇನೆ..ನಾನು ಹೆಮ್ಮೆಯಿಂದ ಹೇಳಬಯಸುತ್ತೇನೆ ಭಾರತದ ಸೇನೆಯಲ್ಲಿ ಲಘು ಸೇವಾ ಆಯೋಗದ ಮೂಲಕ ನೇಮಕವಾಗಿರುವ ಮಹಿಳಾ ಅಧಿಕಾರಿಗಳಿಗೆ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಶಾಶ್ವತ ಆಯೋಗದ ನೇಮಕ ಪ್ರಕಟಿಸುತ್ತೇನೆ. ಈ ಪ್ರಕ್ರಿಯೆ ಪಾರದರ್ಶಕವಾಗಿರುತ್ತದೆ ಮತ್ತು ಪುರುಷ ಅಧಿಕಾರಿಗಳ ಆಯ್ಕೆಯಂತೆಯೇ ಇರುತ್ತದೆ. ಇದು ದೇಶಕ್ಕೆ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿರುವ ಸಮವಸ್ತ್ರಧಾರಿ ಪುತ್ರಿಯರಿಗೆ ಕೆಂಪುಕೋಟೆಯ ವೇದಿಕೆಯಿಂದ ನಾನು ಪ್ರಕಟಿಸುತ್ತಿರುವ ಕೊಡುಗೆಯಾಗಿದೆ. ಈ ದೇಶ ರಾಷ್ಟ್ರೀಯ ಬದ್ಧತೆ ಪ್ರದರ್ಶಿಸಿದ ಮತ್ತು ದೇಶಪ್ರೇಮಿ ಯುವತಿಯರಿಗೆ ನಮನ ಸಲ್ಲಿಸುತ್ತದೆ. ಇವರು ರಾಷ್ಟ್ರದ ಹೆಮ್ಮೆ. ಬಲಿಷ್ಠ ಭಾರತ ನಿರ್ಮಾಣಕ್ಕೆ ಮಹಿಳೆಯರೂ ಸಮಾನ ಕೊಡುಗೆ ನೀಡುತ್ತಿದ್ದಾರೆ. ದೇಶ ನಮ್ಮ ತಾಯಂದಿರು ಮತ್ತು ಸೋದರಿಯರು ನೀಡುತ್ತಿರುವ ಸಮರ್ಥ ಕೊಡುಗೆಯ ಅನುಭವ ಪಡೆಯುತ್ತಿದೆ.
ಕೃಷಿ ಭೂಮಿಯಿಂದ-ಕ್ರೀಡಾ ಕ್ಷೇತ್ರದವರೆಗೆ, ನಮ್ಮ ದೇಶದ ತ್ರಿವರ್ಣ ಧ್ವಜದ ಗೌರವವನ್ನು ಮಹಿಳೆಯರು ಹೆಚ್ಚಿಸುತ್ತಿದ್ದಾರೆ. ಪಂಚಾಯತಿಯಿಂದ ಹಿಡಿದು ಲೋಕಸಭೆವರೆಗೆ ದೇಶದ ಅಭಿವೃದ್ಧಿಗೆ ತಮ್ಮ ಕೊಡುಗೆ ಕೊಡುತ್ತಿದ್ದಾರೆ. ಶಾಲೆಯಿಂದ ಆರಂಭಿಸಿ ಸೈನ್ಯದವರೆಗೆ ಹೆಗಲಿಗೆ ಹೆಗಲು ನೀಡಿ ಮುನ್ನಡೆಸುತ್ತಿದ್ದಾರೆ. ಆದರೆ, ಇಷ್ಟೊಂದು ಪ್ರಮಾಣದಲ್ಲಿ ಧೈರ‍್ಯದಿಂದ ಹೆಜ್ಜೆಯಿಡುತ್ತಿದ್ದರೂ, ಅಲ್ಲಲ್ಲಿ ಕೆಲವು ವಿಕೃತಿಗಳನ್ನೂ ಗಮನಿಸುತಿದ್ದೇವೆ. ಮಹಿಳೆಯರ ವಿರುದ್ಧದ ರಾಕ್ಷಸೀ ಪ್ರವೃತ್ತಿಯನ್ನೂ ಗಮನಿಸುತ್ತಿದ್ದೇವೆ. ಬಲಾತ್ಕಾರ ಎಂಬುದು ವೇದನೆ ಉಂಟು ಮಾಡುವ ವಿಷಯ. ಆ ಬಲಾತ್ಕಾರದಿಂದ ಸೋದರಿ ಅನುಭವಿಸುವ ನೋವಿಗಿಂತ ಲಕ್ಷಪಟ್ಟು ವೇದನೆ, ನಮಗೆ, ಭಾರತೀಯರಿಗೆ ಆಗಬೇಕು. ಈ ಸಮಾಜದಿಂದ ಈ ರಾಕ್ಷಸೀ ಪ್ರವೃತ್ತಿಗೆ ಮುಕ್ತಿ ಹಾಡಲೇ ಬೇಕು. ಈ ಪ್ರವೃತ್ತಿಯಿಂದ ದೇಶವನ್ನೂ ಮುಕ್ತಗೊಳಿಸಬೇಕು. ಕಾನೂನು ತನ್ನ ಕೆಲಸ ಮಾಡುತ್ತಿದೆ. ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಐದು ದಿನಗಳ ಅಂತರದಲ್ಲಿ ಕಟನಿಯಲ್ಲಿ ಬಲಾತ್ಕಾರಿಗಳ ವಿರುದ್ಧ 5 ದಿನಗಳ ಕಾಲ ಪ್ರಕರಣ ನಡೆಯಿತು. ಐದೇ ದಿನಗಳಲ್ಲಿ ಅವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಯಿತು. ಅದೇ ರೀತಿಯಲ್ಲಿ ರಾಜಾಸ್ಥಾನದಲ್ಲೂ ಕೆಲವೇ ದಿನಗಳ ಕಾಲ ಪ್ರಕರಣ ನಡೆದು, ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ಇಂದು ಗಲ್ಲು ಶಿಕ್ಷೆಯ ಸುದ್ದಿ ಎಷ್ಟು ಪ್ರಖರವಾಗಿ ಹರಡಿದರೆ, ರಾಕ್ಷಸೀ ಪ್ರವೃತ್ತಿಯ ಜನರಲ್ಲಿ ಅಷ್ಟರಮಟ್ಟಿಗೆ ಭಯವನ್ನು ಉಂಟುಮಾಡುತ್ತದೆ. ನಾವು ಈ ಸುದ್ದಿಗಳನ್ನು ಹರಡಬೇಕು. ಗಲ್ಲಿನ ಶಿಕ್ಷೆ ರಾಕ್ಷಸೀ ಪ್ರವೃತ್ತಿಯ ಜನರಲ್ಲಿ ಭಯವನ್ನು ಹುಟ್ಟಿಸಲೇ ಬೇಕು. ನಮಗೆ ಈ ಮನೋಸ್ಥಿತಿಯ ಮೇಲೆಯೇ ದಾಳಿ ಮಾಡಬೇಕಿದೆ. ಈ ಮನೋಧಾರೆಯ ಮೇಲೆ, ಈ ವಿಕೃತಿಯ ಮೇಲೆ ದಾಳಿ ಮಾಡಬೇಕಿದೆ.
ಸೋದರ-ಸೋದರಿಯರೆ, ಇದೇ ಯೋಚನೆ, ಇದೇ ವಿಕೃತ ಮನೋಭಾವ ಅಕ್ಷಮ್ಯ ಅಪರಾಧದ ಉಗಮಕ್ಕೆ ಕಾರಣವಾಗುತ್ತದೆ. ನಮಗೆ ’ಕಾನೂನಿನ ಆಡಳಿತ’ ಕಾನೂನಿನ ನಿಯಮಗಳೇ ಪರಮೋಚ್ಚವಾಗಿದೆ. ಅದರಲ್ಲಿ ಯಾವುದೇ ರಾಜಿ ಇಲ್ಲ. ಯಾರಿಗೂ ಕಾನೂನನ್ನು ಕೈಗೆತ್ತಿಕೊಳ್ಳುವ ಹಕ್ಕನ್ನು ನೀಡಲು ಸಾಧ್ಯವೇ ಇಲ್ಲ. ಪರಿವಾರದಲ್ಲಿ,ಶಾಲೆಗಳಲ್ಲಿ, ಕಾಲೇಜುಗಳಲ್ಲಿ, ಪ್ರಚಾರ ಮಾಧ್ಯಮಗಳಲ್ಲಿ - ನಮ್ಮ ಮಕ್ಕಳ, ನಮ್ಮ ಮುಂದಿನ ಪೀಳಿಗೆಯ ಮುಗ್ಧ ಮಕ್ಕಳ ಬಗ್ಗೆ ಕಾಳಜಿ ಅವಶ್ಯ. ಅದಕ್ಕಾಗಿ ಅವರ ನರನಾಡಿಗಳಲ್ಲಿ ಮಹಿಳೆಯ ಬಗ್ಗೆ ಗೌರವ ಸೂಚಿಸುವ ಸಂಸ್ಕಾರವಿರಲಿ. ಮಹಿಳೆಯರನ್ನು ಆದರಿಸುವುದು ನಮ್ಮ ಸಂಸ್ಕಾರದ ರೀತಿನೀತಿಯ ನಡೆ ಆಗಿದೆ ಎಂಬುವ ಅರಿವು ಅವರಿಗೆ ಆಗಲಿ. ನಾರಿಗೆ ತೋರಿಸುವ ಗೌರವ ನಾವು ಯೋಗ್ಯ ರೀತಿಯಲ್ಲಿ ಜೀವಿಸುವ ಪರಿಯನ್ನು ತೋರಿಸುವಂಥಾದ್ದಾಗಿದೆ. ನಾವು ನಮ್ಮ ಪರಿವಾರಗಳಲ್ಲಿ ಈ ಸಂಸ್ಕಾರವನ್ನು ನೀಡಲೇಬೇಕಿದೆ.
ಸಹೋದರೆ ಮತ್ತು ಸಹೋದರಿಯರೇ, ನಮ್ಮ ಮುಸಲ್ಮಾನ್ ಮಹಿಳೆಯರಿಗೆ ಕೆಂಪುಕೋಟೆಯಿಂದ ಭರವಸೆಯನ್ನು ಪುನರುಚ್ಚರಿಸುತ್ತೇನೆ. ’ತ್ರಿವಳಿ ತಲಾಖ್’ನಮ್ಮ ದೇಶದಲ್ಲಿ ಮುಸ್ಲಿಂ ಪುತ್ರಿಯರ ಜೀವನವನ್ನು ಹಾಳುಮಾಡಿದೆ. ಯಾರಿಗೆ ತಲಾಖ್ ಎದುರಿಸಿಲ್ಲವೋ ಅವರೂ ಈ ಒತ್ತಡದಲ್ಲೇ ಸಿಲುಕಿ ನಲುಗುತ್ತಿದ್ದಾರೆ. ಸಂಸತ್ತಿನ ಈ ಅಧಿನೇಶನದಲ್ಲೇ ಕಾನೂನನ್ನು ಜಾರಿಗೆ ತಂದು ನಮ್ಮ ಮಹಿಳೆಯರಿಗೆ ಈ ಕೆಟ್ಟ ನೀತಿಯಿಂದ ಮುಕ್ತಿ ಕೊಡಿಸಲೇಬೇಕೆಂಬ ಪಣತೊಟ್ಟಿದ್ದೇವೆ. ಆದರೆ ಈ ನೀತಿಯನ್ನು ಜಾರಿಗೊಳಿಸುವುದಕ್ಕೂ ವಿರೋಧಿಸುವ ಜನ ಇದ್ದಾರೆ. ಆದರೆ ನಾನು - ಈ ಕೆಟ್ಟನೀತಿಯ ದೆಸೆಯಿಂದಾಗಿ ನಲುಗುತ್ತಿರುವ ನನ್ನ ಸೋದರಿಯರಿಗೆ, ಮುಸ್ಲಿಂ ಮಹಿಳೆಯರಿಗೆ ಭರವಸೆ ನೀಡ್ತುತ್ತೇನೆ - ನಿಮ್ಮ ಹಕ್ಕಿಗೆ ನ್ಯಾಯಕ್ಕೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳುತ್ತೇನೆ.’ ನಾನು ನಿಮ್ಮ ಆಶೋತ್ತರಗಳನ್ನು ಪೂರ್ಣಮಾಡಿಯೇ ತೀರುತ್ತೇನೆ.
ಪ್ರೀತಿಯ ಭಾರತೀಯರೆ, ಸೇನೆಯಿರಲಿ, ಅರೆಸೇನಾಬಲವಿರಲಿ, ಅರೆಸೇನಾಪಡೆ ಇರಲಿ, ನಮ್ಮ ಆರಕ್ಷಕ ದಳ ಪೊಲೀಸ್ ಇರಲಿ, ಇವೆರೆಲ್ಲರೂ ಒಟ್ಟಾಗಿ ಭಾರತದ ಆಂತರಿಕ ಭದ್ರತೆಯ ಅನುಭವವನ್ನು ಉಂಟುಮಾಡಿದ್ದಾರೆ. ಅವರೆಲ್ಲರ ಶ್ರದ್ಧೆ, ತಪಸ್ಸು ಪರಿಶ್ರಮದ ಕಾರಣದಿಂದ ಶಾಂತಿಯ ವಾತಾವರಣ ಉಂಟಾಗಿ ಒಂದು ರೀತಿಯ ಹೊಸ ವಿಶ್ವಾಸ ಬಂದಿದೆ. ನಮಗೆ ಅಲ್ಲಲ್ಲಿ ಬಾಂಬ್ ವಿಸ್ಫೋಟದ, ಬಂದೂಕು ಸದ್ದಿನ ಸುದ್ದಿಗಳು ಪ್ರಮುಖವಾಗಿ ಕೇಳಿಬರುತ್ತಿದ್ದವು. ದರೆ ಇಂದು ಮೇಘಾಲಯ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಮೂರು ದಶಕಗಳಿಂದ ಶಕ್ತಿಯಾಗಿದ್ದ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯಿದೆ (ಎ.ಎಫ್.ಎಸ್.ಪಿ.ಎ.) ಹಿಂಪಡೆಯಲಾಗಿದೆ. ಇದು ನಮ್ಮ ಭದ್ರತಾಪಡೆಗಳ ಪ್ರಯತ್ನದಿಂದ ಸಾಧ್ಯವಾಗಿದೆ. ಸರ್ಕಾರ ಕೈಗೊಂಡ ಪ್ರಯತ್ನದಿಂದ ಸಾಧ್ಯವಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನುಷ್ಠಾನ ಮಾಡಿದ ಅಭಿವೃದ್ಧಿಯೋಜನೆಗಳಿಂದ ಸಾಧ್ಯವಾಗಿದೆ ಮತ್ತು ಜನರನ್ನು ರಾಷ್ಟ್ರೀಯ ಮುಖ್ಯವಾಹಿನಿಗೆ ಸಂಪರ್ಕಿಸಲು ಮಾಡಿದ ಪ್ರಯತ್ನಗಳಿಂದ ಸಾಧ್ಯವಾಗಿದೆ. ಎಷ್ಟೋ ವರ್ಷಗಳ ನಂತರ ತ್ರಿಪುರಾ ಮತ್ತು ಮೇಘಾಲಯ ಎರಡೂ ರಾಜ್ಯಗಳು ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯಿದೆಯ ವ್ಯಾಪ್ತಿಯಿಂದ ಮುಕ್ತಿ ಪಡೆದಿವೆ. ಅರುಣಾಚಲಪ್ರದೇಶದ ಹಲವು ಜಿಲ್ಲೆಗಳು ಇದರಿಂದ ಬಿಡುಗಡೆ ಪಡೆದಿವೆ. ಬೆರಳೆಣಿಕೆಯ ಜಿಲ್ಲೆಗಳಲ್ಲಿ ಈ ಸ್ಥಿತಿ ಇನ್ನೂ ಇದೆ.
ಎಡ ಪಂಥೀಯ ವಿಧ್ವಂಸಕತೆ, ಮಾವೋವಾದಿ ಇನ್ನೂ ದೇಶದಲ್ಲಿ ರಕ್ತಹರಿಸುತ್ತಿದೆ. ಹಿಂಸಾತ್ಮಕ ಘಟನೆಗಳಿಂದಾಗಿ, ಜನ ಓಡಿಹೋಗಿ ಕಾಡುಗಳಲ್ಲಿ ಅವಿತುಕೊಳ್ಳುವುದು ನಡೆಯುತ್ತಿತ್ತು. ಇವೆಲ್ಲವೂ ಕೂಡ ನಮ್ಮ ರಕ್ಷಣಾ ಪಡೆಗಳ ಪ್ರಯತ್ನದಿಂದ, ಹೊಸ ಹೊಸ ಅಭಿವೃದ್ಧಿ ಯೋಜನೆಗಳಿಂದ, ಎಡಪಂಥೀಯ ಉಗ್ರಗಾಮಿಗಳಿಂದಾಗಿ ಸಾವಿನ ದವಡೆಯಲ್ಲಿ ಹೆದರಿಕೆಯಲ್ಲೇ ಜೀವಿಸುತ್ತಿದ್ದ 126 ಜಿಲ್ಲೆಗಳ ಪೈಕಿ ಆ ಹೆದರಿಕೆ ಕಡಿಮೆಯಾಗಿ 90ಜಿಲ್ಲೆಗಳಲ್ಲಿ ಉಗ್ರಗಾಮಿ ಪ್ರವೃತ್ತಿ ಅಂತ್ಯಕಂಡಿದೆ. ಉಳಿದ ಜಿಲ್ಲೆಗಳಲ್ಲಿ ಎಡ ಪಂಥೀಯ ವಿಧ್ವಂಸಕತೆಗೆ ಅಂತ್ಯ ಹಾಡಲು ಪ್ರಗತಿ ಕ್ಷಿಪ್ರಗತಿಯಲ್ಲಿ ಸಾಗಿದೆ.
ಜಮ್ಮು-ಕಾಶ್ಮೀರದ ವಿಚಾರವಾಗಿ ಅಟಲ್ ಬಿಹಾರಿ ವಾಜಪೇಯಿಯವರು ನಮಗೆ ಸರಿಯಾದ ಮಾರ್ಗ ತೋರಿದ್ದಾರೆ.ಅದೇ ಹಾದಿಯಲ್ಲಿ ಮುಂದುವರೆಯಲು ಬಯಸುತ್ತೇವೆ. ವಾಜಪೇಯಿ ಅವರು ಹೇಳಿದ್ದರು - ಮಾನವತೆ, ಜಮ್ಮುತನ, ಕಾಶ್ಮೀರಿತನ [ಇನ್ಸಾನಿಯತ್, ಜಮ್ಮೂರಿಯತ್, ಕಾಶ್ಮೀರಿಯತ್] - ಈ ಮೂರು ಅಂಶಗಳನ್ನು ಒಟ್ಟಾಗಿಸಿಕೊಂಡು ಜಮ್ಮು ಮತ್ತು ಕಾಶ್ಮೀರವನ್ನು ಅಭಿವೃದ್ಧಿಪಡಿಸುತ್ತೇವೆ, ಅದು ಲಡಾಖ್ ಇರಲಿ, ಜಮ್ಮು ಇರಲಿ ಅಥವಾ ಶ್ರೀನಗರ ಕಣಿವೆ ಇರಲಿ, ಎಲ್ಲೆಡೆಯಲ್ಲೂ ಶ್ರೀಸಾಮಾನ್ಯನ ಆಶೋತ್ತರಗಳು ಈಡೇರುವಂಥ, ಮೂಲಸೌಕರ್ಯ ಬಲಗೊಂಡ ಸಮತೋಲಿತ ಅಭಿವೃದ್ಧಿ ಆಗಬೇಕು ಎಂದು ನಾವು ಬಯಸುತ್ತೇವೆ. ನಾವು ನಮ್ಮ ಹೃದಯದಲ್ಲಿ ಭ್ರಾತೃತ್ವದೊಂದಿಗೆ ಮುನ್ನಡೆಯಲು ಬಯಸುತ್ತೇವೆ. ನಾವು ಬಂದೂಕಿನ ಗುಂಡುಗಳಿಂದ ತುಂಬಿದ ರಸ್ತೆಯಲ್ಲಿ ಸಾಗಲು ಇಚ್ಛಿಸುವುದಿಲ್ಲ. ನಾವು ದೇಶಾಭಿಮಾನದೊಂದಿಗೆ ನಮ್ಮೊಂದಿಗೆ ನಿಂತ ಕಾಶ್ಮೀರಿ ಜನರೊಂದಿಗೆ ಪ್ರೀತಿ ಮತ್ತು ಮಮಕಾರದೊಂದಿಗೆ ಸಾಗಲು ಬಯಸುತ್ತೇವೆ.
ಸಹೋದರ, ಸಹೋದರಿಯರೇ, ನೀರಾವರಿ ಯೋಜನೆಗಳು ಪ್ರಗತಿ ಕಾಣುತ್ತಿವೆ. ಐ.ಐ.ಟಿ., ಐ.ಐ.ಎಮ್.ಗಳ ನಿರ್ಮಾಣ ಕಾರ್ಯ ತ್ವರಿತ ಪ್ರಗತಿಯಲ್ಲಿದೆ. ದಾಲ್ ಸರೋವರದ ಪುನಶ್ಚೇತನ ಕಾಮಗಾರಿಯೂ ನಡೆಯುತ್ತಿದೆ. ಮಹತ್ವದ ವಿಚಾರವೆಂದರೆ, ಕಳೆದ ಒಂದು ವರ್ಷದಿಂದ ನನ್ನನ್ನು ಭೇಟಿ ಮಾಡುತ್ತಿರುವ ಗ್ರಾಮಗಳ ಮುಖ್ಯಸ್ಥರು ಪಂಚಾಯತ್ ಚುನಾವಣೆಗೆ ಬೇಡಿಕೆ ಇಡುತ್ತಿದ್ದರು. ಕಾರಣಾಂತರದಿಂದ ಅಲ್ಲಿ ಇನ್ನೂ ಚುನಾವಣೆಗಳನ್ನು ನಡೆಸಲು ಆಗಿಲ್ಲ. ಮುಂಬರುವ ತಿಂಗಳುಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಗ್ರಾಮಸ್ಥರಿಗೆ ಈ ಅವಕಾಶ ದೊರಕುತ್ತದೆ ಎಂದು ತಿಳಿಸಲು ನನಗೆ ಸಂತೋಷವೆನಿಸುತ್ತದೆ. ತಮ್ಮ ಗ್ರಾಮ ವ್ಯವಸ್ಥೆಯನ್ನು ಸದೃಢಗೊಳಿಸಿಕೊಳ್ಳುವ ಅವಕಾಶ ಅವರಿಗೆ ದೊರೆಯಲಿದೆ. ಭಾರತ ಸರ್ಕಾರದಿಂದ ನೇರವಾಗಿ ಹಳ್ಳಿಗೆ ಬೃಹತ್ ಮೊತ್ತದ ಆರ್ಥಿಕ ನೆರವು ಸಹ ದೊರಯಲಿದೆ. ಇದರಿಂದ ಗ್ರಾಮದ ಮುಖ್ಯಸ್ಥರು ತಮ್ಮ ಹಳ್ಳಿಯನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಬಹುದು. ಹೀಗಾಗಿಯೇ ನಾವು ಪಂಚಾಯತ್ ಮತ್ತು ಸ್ಥಳೀಯ ನಗರ ಸಂಸ್ಥೆಗಳ ಚುನಾವಣೆ ನಡೆಸಬೇಕು ಎಂಬ ಉದ್ದೇಶದೊಂದಿಗೆ ಕೆಲಸ ಮಾಡುತ್ತಿದ್ದೇವೆ.
ಸಹೋದರ ಸಹೋದರಿಯರೇ, ನಾವು ನಮ್ಮ ದೇಶವನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಬೇಕಿದೆ. ಅದಕ್ಕಾಗೇ ’ಸಬ್ ಕಾ ಸಾಥ್ - ಸಬ್ ಕಾ ವಿಕಾಸ್’ ’ಎಲ್ಲರೊಂದಿಗೆ ಎಲ್ಲರ ವಿಕಾಸ ಎಂಬ ಮಂತ್ರವಿದೆ. ನನ್ನದು-ನಿನ್ನದು ಅನ್ನುವದಿಲ್ಲ. ಸ್ವಜನ ಪಕ್ಷಪಾತಕ್ಕೆ ಆಸ್ಪದವಿಲ್ಲ. ಹೀಗಾಗಿ ನಾವು ಒಂದು ಗುರಿಯನ್ನು ಗಮನದಲ್ಲಿ ಇಟ್ಟುಕೊಂಡು ಮುಂದೆ ಸಾಗುತ್ತಿದ್ದೇವೆ ಮತ್ತು ಈ ತ್ರಿವರ್ಣ ಧ್ವಜದ ಕೆಳಗೆ ನಿಂತಿದ್ದೇವೆ, ಅದಕ್ಕಾಗಿ ನಾವು ಎಂಥ ತ್ಯಾಗಕ್ಕೂ ಸಿದ್ಧ ಎಂದು ನಾನು ಮತ್ತೊಮ್ಮೆ ಪುನರುಚ್ಚರಿಸುತ್ತೇನೆ.
ಪ್ರತಿಯೊಬ್ಬ ಭಾರತೀಯನಿಗೂ ತನ್ನದೇ ಸ್ವಂತ ಸೂರಿರಲಿ – ಸರ್ವರಿಗೂ ಮನೆ. ಪ್ರತಿಯೊಂದು ಮನೆಗೂ ವಿದ್ಯುತ್ ಸಂಪರ್ಕವಿರಲಿ- ಸರ್ವರಿಗೂ ವಿದ್ಯುತ್, ಪ್ರತಿಯೊಬ್ಬ ಭಾರತೀಯನೂ ಅಡುಗೆ ಮನೆಯಲ್ಲಿ ಹೊಗೆಮುಕ್ತರಾಗಿರಲಿ ಹೀಗಾಗಿಯೇ ಎಲ್ಲರಿಗೂ ಅಡುಗೆ ಅನಿಲ ಯೋಜನೆ ಇದೆ. ಪ್ರತಿಯೊಬ್ಬ ಭಾರತೀಯನಿಗೂ ತನ್ನ ಅಗತ್ಯ ಪೂರೈಕೆ ಮಾಡಿಕೊಳ್ಳುವಷ್ಟು ನೀರಿರಲಿ – ಸರ್ವರಿಗೂ ನೀರು, ಪ್ರತಿಯೊಬ್ಬರಿಗೂ ಶೌಚಾಲಯವರಲಿ – ಪ್ರತಿಯೊಬ್ಬರಿಗೂ ನೈರ್ಮಲ್ಯ. ಪ್ರತಿಯೊಬ್ಬ ಭಾರತೀಯನೂ ಕುಶಲಿಯಾಗಿರಲಿ – ಸರ್ವರಿಗೂ ಕೌಶಲ, ಪ್ರತಿಯೊಬ್ಬ ಭಾರತೀಯನಿಗೂ ಕೈಗೆಟಕುವ ಮತ್ತು ಗುಣಮಟ್ಟದ ಆರೋಗ್ಯ ಸೇವೆ ದೊರಕಬೇಕು – ಹೀಗಾಗಿ ಸರ್ವರಿಗೂ ಆರೋಗ್ಯ, ಪ್ರತಿಯೊಬ್ಬ ಭಾರತೀಯನೂ ತಾನು ಸುರಕ್ಷಿತವಾಗಿದ್ದೇನೆಂಬ ಭಾವನೆ ಹೊಂದಬೇಕು, ಪ್ರತಿಯೊಬ್ಬ ಭಾರತೀಯನೂ ವಿಮೆ ಹೊಂದಬೇಕು – ಸರ್ವರಿಗೂ ವಿಮೆ, ಪ್ರತಿಯೊಬ್ಬ ಭಾರತೀಯನಿಗೂ ಇಂಟರ್ ನೆಟ್ ಸೇವೆ ಲಭಿಸಬೇಕು ಹೀಗಾಗಿ ಸರ್ವರಿಗೂ ಸಂಪರ್ಕ, ನಾವು ದೇಶವನ್ನು ಈ ಕೆಳಗಿನ ಮಂತ್ರದೊಂದಿಗೆ ಮುಂದೆ ತೆಗೆದುಕೊಂಡು ಹೋಗಲು ಇಚ್ಛಿಸುತ್ತೇವೆ.
ನನ್ನ ಪ್ರೀತಿಯ ಸಹೋದರ ಮತ್ತು ಸಹೋದರಿಯರೇ, ಜನರು ನನ್ನ ಬಗ್ಗೆ ಕೆಲವು ಮಾತುಗಳನ್ನಾಡುತ್ತಾರೆ. ಅವರು ಏನೇ ಹೇಳಿರಲಿ, ನಾನು ಸಾರ್ವತ್ರಿಕವಾಗಿ ಕೆಲವನ್ನು ಇಂದು ಒಪ್ಪಿಕೊಳ್ಳಲು ಬಯಸುತ್ತೇನೆ.
ನಿಜ. ಬೇರೆ ದೇಶಗಳು ಅಭಿವೃದ್ಧಿಯಲ್ಲಿ ನಮಗಿಂತ ಮುಂದೆ ಸಾಗಿವೆ ಹೀಗಾಗಿ ನನಗೆ ತಾಳ್ಮೆಯಿಲ್ಲ. ನಾನು ನನ್ನ ದೇಶವನ್ನು ಆ ಎಲ್ಲ ರಾಷ್ಟ್ರಗಳಿಗಿಂತ ಮುಂದೆ ತೆಗೆದುಕೊಂಡು ಹೋಗಬೇಕು.ಹೀಗಾಗಿ ನಾನು ವಿಶ್ರಾಂತಿರಹಿತ ಮತ್ತು ನನಗೆ ತಾಳ್ಮೆಯಿಲ್ಲ.
ನನ್ನ ಪ್ರೀತಿಯ ದೇಶವಾಸಿಗಳೆ, ನಾವು ಕಾರ್ಯನಿರತ ಮತ್ತು ನಾನು ದಣಿವರಿಯದವ ಕಾರಣ ನಮ್ಮ ದೇಶದ ಮಕ್ಕಳ ಅಭಿವೃದ್ಧಿಯಲ್ಲಿ ಅಪೌಷ್ಟಿಕತೆ ದೊಡ್ಡ ತೊಡಕಾಗಿದೆ. ಅದು ದೊಡ್ಡ ಕಗ್ಗಂಟಾಗಿದೆ. ನಾನು ದೇಶದಿಂದ ಅಪೌಷ್ಟಿಕತೆ ತೊಡೆದುಹಾಕಲು ದಣಿವರಿಯದವನಾಗಿದ್ದೇನೆ.
ನನ್ನ ದೇಶವಾಸಿಗಳೇ, ನಾನು ಕ್ಷೋಭೆಗೊಳಗಾಗಿದ್ದೇನೆ. ಹೀಗಾಗಿ ಒಬ್ಬ ಬಡ ವ್ಯಕ್ತಿ ಸೂಕ್ತ ಆರೋಗ್ಯ ಸೇವೆ ಪಡೆಯಲಿದ್ದಾನೆ. ನಾನು ದಣಿವರಿಯದವನಾಗಿದ್ದೇನೆ, ಹೀಗಾಗಿ ನನ್ನ ದೇಶದ ಶ್ರೀಸಾಮಾನ್ಯ ಸಹ ರೋಗಗಳನ್ನು ತೊಡೆದೋಡಿಸಿ, ಆರೋಗ್ಯ ಉಳಿಸಿಕೊಳ್ಳಬೇಕಿದೆ.
ಸಹೋದರ ಮತ್ತು ಸಹೋದರಿಯರೇ, ನಾನು ನಮ್ಮ ಜನರಿಗೆ ಗುಣಮಟ್ಟದ ಬದುಕು ನೀಡಬೇಕಿದೆ ಅದ್ಕಕಾಗಿ ನಾನು ದಣಿವರಿಯದವನಾಗಿದ್ದೇನೆ. ಹೀಗಾದಾಗ ಅವರಿಗೆ ಸುಗಮವಾಗಿ ಬದುಕುವ ಅವಕಾಶ ದೊರಕುತ್ತದೆ, ಆಗ ಸರ್ವಾಂಗೀಣ ಅಭಿವೃದ್ಧಿ ಆಗುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಾನು ದೇಶದಲ್ಲಿ ನಾಲ್ಕನೇ ಕೈಗಾರಿಕಾ ಕ್ರಾಂತಿ ಮಾಡಬೇಕು, ಅದು ಜ್ಞಾನಾಧಾರಿತವಾಗಿರಬೇಕು, ಆ ಕ್ರಾಂತಿ ಐಟಿ ಕೌಶಲ ಇರುವವರಿಂದ ಆಗಬೇಕು. ಇದಕ್ಕಾಗಿ ನಾನು ದಣಿವರಿಯದವನಾಗಿದ್ದೇನೆ, ನಾನು ಕ್ಷೋಭೆಗೆ ಒಳಗಾಗಿದ್ದೇನೆ ಮತ್ತು ತಾಳ್ಮೆ ಕಳೆದುಕೊಂಡಿದ್ದೇನೆ. ನಾನು ನನ್ನ ದೇಶ ಈ ಎಲ್ಲವನ್ನೂ ಸಾಧಿಸಲಿ ಎಂದು ಆತುರ ಪಡುತ್ತಿದ್ದೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ದೇಶ ಸಂಪನ್ಮೂಲ ಮತ್ತು ತನ್ನ ಗರಿಷ್ಠ ಸಾಮರ್ಥ್ಯವನ್ನು ಉಪಯೋಗಿಸಿಕೊಂಡು, ವಿಶ್ವದಲ್ಲಿ ನಾವು ಹೆಮ್ಮೆಯಿಂದ ಮುನ್ನಡೆಯಬೇಕಿದೆ. ಇದಕ್ಕಾಗಿ ನಾನು ವಿಶ್ರಾಂತಿರಹಿತನಾಗಿದ್ದೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಾವು ಮುಂದೆ ಸಾಗಲು ಇಚ್ಛಿಸುತ್ತೇವೆ. ನಾವು ನಿಂತಲ್ಲೇ ನಿಲ್ಲುವುದನ್ನು ಒಪ್ಪುವುದಿಲ್ಲ, ನಾವು ತಟಸ್ಥರಾಗುವುದಿಲ್ಲ ಮತ್ತು ಬೇರೆಯವರ ಎದುರು ತಲೆ ಬಾಗುವುದಿಲ್ಲ. ಅದು ನಮ್ಮ ಸ್ವಭಾವವೂ ಅಲ್ಲ. ನನ್ನ ದೇಶ ಎಂದಿಗೂ ನಿಂತಲ್ಲೇ ನಿಲ್ಲುವುದಿಲ್ಲ, ಅದು ಎಂದಿಗೂ ತಲೆ ಬಾಗುವುದಿಲ್ಲ ಮತ್ತು ಅದು ದಣಿಯುವುದೂ ಇಲ್ಲ. ನಾವು ಶ್ರೇಷ್ಠ ಎತ್ತರ ಸಾಧಿಸಬೇಕಿದೆ, ನಾವು ಮುಂದೆ ಸಾಗುತ್ತಲೇ ಇರಬೇಕು.
ಸಹೋದರ ಸಹೋದರಿಯರೇ. ನಾವು ಪುರಾತನ ವೇದಗಳ ಶ್ರೇಷ್ಠ ವೈಭವದೊಂದಿಗೆ, ಶ್ರೀಮಂತ ಪರಂಪರೆಯನ್ನು ಹೊಂದಿದ್ದೇವೆ. ಆ ಪರಂಪರೆ ನಮ್ಮ ಆತ್ಮವಿಶ್ವಾಸದಿಂದ ಬಂದುದಾಗಿದೆ. ನಾವು ಆ ಪರಂಪರೆಯನ್ನು ಮುಂದೆ ತೆಗೆದುಕೊಂಡು ಹೋಗಲಿಚ್ಛಿಸುತ್ತೇವೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಾವು ಭವಿಷ್ಯದ ಬಗ್ಗೆ ಕೇವಲ ಕನಸು ಕಾಣವುದಿಲ್ಲ, ಭವಿಷ್ಯದಲ್ಲಿ ಹೊಸ ಎತ್ತರಕ್ಕೆ ಸಾಗಲು ಬಯಸುತ್ತೇವೆ. ನಾವು ಅಗ್ರಗಣ್ಯರಾಗುವ ಕನಸಿನೊಂದಿಗೆ ಮುಂದೆ ಸಾಗುತ್ತಿದ್ದೇವೆ. ಹೀಗಾಗಿಯೇ ನನ್ನ ದೇಶವಾಸಿಗಳೇ, ನಾವು ಹೊಸ ಭರವಸೆ, ಹೊಸ ಹುರುಪು ಮತ್ತು ಹೊಸ ನಂಬಿಕೆಯನ್ನು (ನಿಮ್ಮಲ್ಲಿ) ತುಂಬಲು ಬಯಸುತ್ತೇನೆ. ಕಾರಣ ಅದರೊಂದಿಗೆ ನನ್ನ ದೇಶ ತನ್ನ ಕನಸು ನನಸು ಮಾಡಬಹುದಾಗಿದೆ. ಹೀಗಾಗಿಯೇ ನನ್ನ ಪ್ರೀತಿಯ ದೇಶವಾಸಿಗಳೇ..
अपने मन में एक लक्ष्य लिए,
अपने मन में एक लक्ष्य लिए,
मंजिल अपनी प्रत्यक्ष लिए,
अपने मन में एक लक्ष्य लिए,
मंजिल अपनी प्रत्यक्ष लिए हम तोड़ रहे है जंजीरें,
हम तोड़ रहे हैं जंजीरें,
हम बदल रहे हैंतस्वीरें,
ये नवयुग है, ये नवयुग है,
ये नवभारत है, ये नवयुग है,
ये नवभारत है।
“खुद लिखेंगे अपनी तकदीर, हम बदल रहे हैं तस्वीर,
खुद लिखेंगे अपनी तकदीर, ये नवयुग है, नवभारत है,
हम निकल पड़े हैं, हम निकल पड़े हैं प्रण करके,
हम निकल पड़े हैं प्रण करके, अपना तनमन अर्पण करके,
अपना तनमन अर्पण करके, ज़िद है, ज़िद है, ज़िद है,
एक सूर्य उगाना है, ज़िद है एक सूर्य उगाना है,
अम्बर से ऊंचा जाना है, अम्बर से ऊंचा जाना है,
एक भारत नया बनाना है, एक भारत नया बनाना है।।”
ಮನಸ್ಸಿನಲ್ಲಿಹುದು ಗುರಿ - ಕಣ್ಮುಂದೆ ಅದರ ಗರಿ
ಭೇದಿಸುತ್ತಾ ಬಂಧನ - ಮೂಡಿಸುವೆವು ಹೊಸ ಚಿತ್ರಣ
ಇದು ನವಯುಗ - ಇದು ನವಭಾರತ -
ಸ್ವತಃ ಬರೆಯೋಣ - ನಮ್ಮ ಭವಿಷ್ಯದ ಗಾಥೆ
ನಾವಿಟ್ಟಿದ್ದೇವೆ ಹೆಜ್ಜೆ - ತೊಟ್ಟು ಪಣವನ್ನು - ಅರ್ಪಿಸುತ್ತಾ ತನುಮನವನ್ನು
ಆಗಬೇಕು ಉದಯ ಹೊಸ ಸೂರ್ಯನದು - ಸಾಗಬೇಕು ಅಂಬರದಾಚೆಗೆ ಪಯಣ
ಆಗಲೇ ಬೇಕಿದೆ ನವಭಾರತದ ಉದಯ - ನವ ಭಾರತದ ಉದಯ
ನನ್ನ ಪ್ರೀತಿಯ ಸಹೋದರ ಸಹೋದರಿಯರೇ,
ನಾನು ಮತ್ತೊಮ್ಮೆ ಸ್ವಾತಂತ್ಯೋತ್ಸವದ ಈ ಪವಿತ್ರ ಪರ್ವ ದಿನದಂದು ನನ್ನ ಶುಭ ಕಾಮನೆಗಳನ್ನು ಸಲ್ಲಿಸುತ್ತೇನೆ. ಬನ್ನಿ ಉಚ್ಚಸ್ವರದಲ್ಲಿ ನನ್ನೊಡನೆ ಜೈಹಿಂದ್ ಮಂತ್ರ ಘೊಷಮಾಡಿ.
ಭಾರತ್ ಮಾತಾ ಕೀ - ಜೈ,
ವಂದೇ - ಮಾತರಮ್.
****