Responsive image

Press Information Bureau

Government of India

Prime Minister's Office

ಸರ್ದಾರ್ ಪಟೇಲ್ ಅವರ 142ನೇ ಜನ್ಮದಿನದಂದು “ಏಕತಾ ಓಟ” ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣ

Posted On :31, October 2017 10:33 IST

ಭಾರತ ಮಾತೆಗೆ ಜಯವಾಗಲಿ,
 
ಸರದಾರ್ ಸಾಹೇಬ್ ಅಮರರಾಗಲಿ, ಅಮರರಾಗಲಿ,
 
ವಿಶಾಲ ಸಂಖ್ಯೆಯಲ್ಲಿ ಆಗಮಿಸಿರುವ ಭಾರತ ಮಾತೆಯ ಮುದ್ದಿನ ಮಕ್ಕಳೇ, ಎಲ್ಲ ಯುವ ಸ್ನೇಹಿತರೇ, 31ನೇ ಅಕ್ಟೋಬರ್, ಸರದಾರ್ ವಲ್ಲಭ್ ಭಾಯಿ ಪಟೇಲ್ ಅವರ ಜನ್ಮದಿನ. ಇಂದು 31ನೇ ಅಕ್ಟೋಬರ್ ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯತಿಥಿ ಕೂಡಾ. ಇಂದು ಸಂಪೂರ್ಣ ದೇಶದಲ್ಲಿ ಸರ್ದಾರ್ ಸಾಹೇಬ್ ಅವರ ಜನ್ಮ ಜಯಂತಿಯ ನೆನಪಿನಲ್ಲಿ, ಆ ಮಹಾನ್ ಪುರುಷರು ಭಾರತದ ಸ್ವಾತಂತ್ರಕ್ಕಾಗಿ ಯಾವ ರೀತಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು, ಸ್ವಾತಂತ್ರದ ನಂತರದ ಸಂಕಟದ ಸಮಯದಲ್ಲಿ, ಹರಡಿ ಹಂಚಿಹೋಗುತ್ತಿದ್ದ ವಾತಾವರಣದಲ್ಲಿ, ಆಂತರಿಕ ಸಂಘರ್ಷದ ತೀವ್ರ ಹೋರಾಟದ ನಡುವೆ ತಮ್ಮ ಕುಶಲತೆಯ ಮೂಲಕ, ತಮ್ಮ ದೃಢ ಶಕ್ತಿಯ ಮೂಲಕ, ತಮ್ಮ ಉನ್ನತವಾದ ದೇಶ ಭಕ್ತಿಯ ಮೂಲಕ ಅವರು ಭಾರತದ ಸ್ವಾತಂತ್ರ್ಯಾ ನಂತರ ಉದ್ಭವಿಸಿದ ಸಂಕಷ್ಟದಿಂದ ದೇಶವನ್ನು ಪಾರು ಮಾಡಿದ್ದೇ ಅಲ್ಲದೇ, ತಾವು ದೇಶವನ್ನು ಬಿಟ್ಟು ತೆರಳಿದ ನಂತರ ದೇಶವನ್ನು ಹರಡಿ ಹಂಚಿಹೋಗುವಂತೆ ಮಾಡಿ, ಸಣ್ಣ ಸಣ್ಣ ರಾಜ್ಯಗಳನ್ನಾಗಿ ವಿಭಜಿಸಿ, ಭಾರತವನ್ನು ನಿರ್ನಾಮ ಮಾಡುವ ಆಂಗ್ಲರ ಹುನ್ನಾರದ ವಿರುದ್ಧ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಅವರು ಸಂಕಲ್ಪವನ್ನು ಮಾಡಿದರು. ಸರ್ದಾರ್ ಪಟೇಲ್ ಅವರು ತಮ್ಮ ದೂರದೃಷ್ಟಿಯಿಂದ, ಸಾಮ, ದಾನ, ದಂಡ, ಭೇದ ಈ ರೀತಿಯ ಎಲ್ಲ ನೀತಿ, ರಾಜನೀತಿ, ರಣನೀತಿಯನ್ನು ಉಪಯೋಗಿಸಿ, ಬಹಳ ಕಡಿಮೆ ಸಮಯದಲ್ಲಿ ದೇಶವನ್ನು ಏಕತೆಯ ಸೂತ್ರದಡಿ ಬಂಧಿಸಿದರು. ಬಹುಶ: ಭಾರತದ ಯುವ ಪೀಳಿಗೆಗೆ ಸರ್ದಾರ ಪಟೇಲ್ ಅವರನ್ನು ಪರಿಚಯ ಮಾಡಿಕೊಡುವ ಪ್ರಯತ್ನಗಳೇ ಆಗಲಿಲ್ಲ. ಒಂದು ರೀತಿಯಲ್ಲಿ ಈ ಮಹಾಪುರುಷರ ಹೆಸರನ್ನು ಭಾರತದ ಇತಿಹಾಸದ ಪುಟಗಳಿಂದ ಅಳಿಸಿ ಹಾಕುವ ಅಥವಾ ಅವರನ್ನು ಸಣ್ಣವರನ್ನಾಗಿಸುವ ಪ್ರಯತ್ನಗಳು ನಡೆದವು. ಯಾವುದೇ ಆಡಳಿತ ಸರ್ದಾರ್ ಸಾಹೇಬ್ ಅವರಿಗೆ ಮಾನ್ಯತೆ ನೀಡಲಿ, ನೀಡದಿರಲಿ, ರಾಜಕೀಯ ಪಕ್ಷಗಳು ಅವರ ಮಹತ್ವವನ್ನು ಅರಿಯಲಿ, ಅರಿಯದೇ ಇರಲಿ, ಆದರೆ ಈ ದೇಶದ ಯುವ ಪೀಳಿಗೆ ಒಂದು ಕ್ಷಣ ಕೂಡಾ ಸರ್ದಾರ್ ಪಟೇಲ್ ಅವರನ್ನು ಮರೆಯುವುದಿಲ್ಲ, ಇತಿಹಾಸದ ಪುಟಗಳಿಂದ ಅವರು ಮರೆಯಾಗಲು ನಮ್ಮ ಯುವಜನತೆ ಬಿಡುವುದಿಲ್ಲ,  ಇವೆಲ್ಲದರ ಪರಿಣಾಮವಾಗಿಯೇ, ದೇಶ ನಮಗೆ ಸೇವೆ ಸಲ್ಲಿಸುವ ಅವಕಾಶ ಮಾಡಿಕೊಟ್ಟಾಗ, ನಾವು ಸರ್ದಾರ್ ಪಟೇಲ್ ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸುವ ಮೂಲಕ ಆ ಮಹಾಪುರುಷನ ಉತ್ತಮ ಕಾರ್ಯಗಳನ್ನು ಮುಂದಿನ ಪೀಳಿಗೆ ನೆನಪಿಟ್ಟುಕೊಳ್ಳುವಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಆದುದರಿಂದಲೇ ಏಕತಾ ಓಟವನ್ನು ನಾವು ಆಯೋಜಿಸಿದ್ದು, ದೇಶದ ಯುವಜನತೆ ಈ ಓಟದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿರುವುದು ನನಗೆ ಸಂತಸ ತಂದಿದೆ.
 
ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಬಾಬು ಅವರ ಮಾತುಗಳು ನಮಗೆ ಚಿಂತನೆಗೆ ದೂಡುತ್ತದೆ. ದೇಶದ ಪ್ರಥಮ ರಾಷ್ಟ್ರಪತಿ ರಾಜೇಂದ್ರ ಬಾಬು ಅವರು, ಇಂದು ನಮಗೆ ಯೋಚಿಸಲು ಮತ್ತು ಮಾತನಾಡಲು ಭಾರತದ ಹೆಸರು ದೊರೆಯುತ್ತಿದೆ. ಇದು ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಅವರ ವ್ಯವಹಾರ ಕುಶಲತೆ ಮತ್ತು ಆಡಳಿತದಲ್ಲಿ ಆವರಿಗಿದ್ದ ಬಿಗಿಯಾದ ಹಿಡಿತದಿಂದ ಸಾಧ್ಯವಾಗಿದೆ. ಹೀಗಿದ್ದಾಗ್ಯೂ ಕೂಡಾ ನಾವು ಸರ್ದಾರ್ ಪಟೇಲ್ ಅವರನ್ನು ಬಹು ಬೇಗ ಮರೆತಿದ್ದೇವೆ. ಹೀಗೆಂದು ಭಾರತದ ಪ್ರಥಮ ರಾಷ್ಟ್ರಪತಿ ರಾಜೇಂದ್ರ ಬಾಬು ಅವರು ಸರ್ದಾರ್ ಪಟೇಲ್ ಅವರನ್ನು ದೇಶ ಮರೆತಿರುವುದಕ್ಕೆ ವಿಷಾದದಿಂದ ಹೇಳಿದ್ದರು. ಇಂದು 31nE ನೇ ಅಕ್ಟೋಬರ್, ಏಕತಾ ಓಟದ ಮೂಲಕ ಸರ್ದಾರ್ ಪಟೇಲ್ ಅವರ ಜನ್ಮದಿನವನ್ನು ಆಚರಿಸುತ್ತಿದ್ದೇವೆ. ಕೆಲವು ಮಂದಿ ಸರ್ದಾರ್ ಸಾಹೇಬ್ ಅವರನ್ನು ಮರೆಸಲು ಬಹಳಷ್ಟು ಪ್ರಯತ್ನ ಪಟ್ಟಾಗ್ಯೂ ಕೂಡಾ ಸರ್ದಾರ್ ಸಾಹೇಬರ ನೆನಪು ಈ ದೇಶದ ನರನಾಡಿಗಳಲ್ಲಿ ನೆಲೆಸಿದೆ ಎಂದು ಬಾಬು ರಾಜೇಂದ್ರ ಬಾಬು ಅವರ ಆತ್ಮಕ್ಕೆ ಸಂಸತವಾಗುತ್ತದೆ. ಸರ್ದಾರ್ ಪಟೇಲ್ ಅವರು ಮತ್ತೊಮ್ಮೆ ನಮ್ಮ ಮುಂದೆ, ಯುವ ಸಂಕಲ್ಪದ ಮೂಲಕ ಹೊರ ಹೊಮ್ಮಿ, ನಮಗೆ ನವ ಸ್ಫೂರ್ತಿಯನ್ನು ನೀಡುತ್ತಿದ್ದಾರೆ. 
 
ಭಾರತ ವಿವಿಧತೆಗಳಿಂದ ತುಂಬಿದೆ. ವಿವಿಧತೆಯಲ್ಲಿ ಏಕತೆ ಇದು ನಮ್ಮ ದೇಶದ ವಿಶೇಷತೆ. ಈ ಮಂತ್ರವನ್ನು ನಾವು ಹೇಳುತ್ತಾ ಬಂದಿದ್ದು, ಇದು ಪ್ರತಿಧ್ವನಿಸುತ್ತಿರುತ್ತದೆ. ಆದರೆ ಎಲ್ಲಿಯ ತನಕ ಈ ವಿವಿಧತೆಯನ್ನು ನಾವು ಗೌರವಿಸುವುದಿಲ್ಲವೋ, ನಮ್ಮ ವಿವಿಧತೆಯ ಬಗ್ಗೆ ಹೆಮ್ಮೆ ಪಡುವುದಿಲ್ಲವೋ, ನಮ್ಮ ವಿವಿಧತೆಯಲ್ಲಿ ಏಕತೆಯ ಸಾಮರ್ಥ್ಯದ ಮೂಲಕ ನಮ್ಮನ್ನು ನಾವು ಆಧ್ಯಾತ್ಮಿಕ ರೂಪದಲ್ಲಿ ಬೆಸೆದುಕೊಳ್ಳುವುದಿಲ್ಲವೋ,  ಅಲ್ಲಿಯವರೆಗೆ ಈ ವಿವಿಧತೆ ಎನ್ನುವ ಶಬ್ಧ ಯಾವುದೇ ಕೆಲಸಕ್ಕೂ ಬರುವುದಿಲ್ಲ. ಆದರೆ ರಾಷ್ಟ್ರ ನಿರ್ಮಾಣದಲ್ಲಿ ನಾವು ಇದನ್ನು ಹೆಚ್ಚಿನ ರೀತಿಯಲ್ಲಿ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ವಿಶ್ವದ ಎಲ್ಲ ಧರ್ಮಗಳೂ, ಎಲ್ಲ ಸಂಪ್ರದಾಯಗಳು, ಎಲ್ಲರ ಆಚಾರ ವಿಚಾರಗಳನ್ನು ಭಾರತ ತನ್ನೊಳಗೆ ಬೆಸೆದುಕೊಂಡಿದೆ ಎಂದು ಪ್ರತಿಯೊಬ್ಬ ದೇಶವಾಸಿಯೂ ಹೆಮ್ಮೆ ಪಡಬಹುದಾಗಿದೆ. ಭಾಷೆ ಭಿನ್ನವಾಗಿದೆ, ಉಡುಗೆ ತೊಡುಗೆಗಳು ಬೇರೆ ಬೇರೆಯದಾಗಿದೆ, ಆಹಾರ ರೀತಿ ನೀತಿಗಳು ವಿಭಿನ್ನವಾಗಿದೆ, ನಂಬಿಕೆಗಳು ಭಿನ್ನವಾಗಿದ್ದು, ಇವೆಲ್ಲವುಗಳ ಹೊರತಾಗಿಯೂ ದೇಶಕ್ಕಾಗಿ ಒಗ್ಗಟ್ಟಾಗಿರುವುದು, ದೇಶಕ್ಕಾಗಿ ಒಂದುಗೂಡುವುದನ್ನು ನಾವು ನಮ್ಮ ಸಾಂಸ್ಕೃತಿಕ ಪರಂಪರೆಯಿಂದ ಅರಿತಿದ್ದೇವೆ. ವಿಶ್ವದಲ್ಲಿ ಇಂದು, ಒಂದೇ ಧರ್ಮದ, ಒಂದೇ ಸಂಪ್ರದಾಯದಲ್ಲಿ ಬೆಳೆದು ದೊಡ್ಡವರಾದವರೂ ಕೂಡಾ ಪರಸ್ಪರರನ್ನು ದ್ವೇಷಿಸುತ್ತಿದ್ದಾರೆ, ಪರಸ್ಪರರ ಜೀವ ತೆಗೆಯುವುದಕ್ಕೆ ಕಾತುರರಾಗಿದ್ದಾರೆ,  21ನೇ ಶತಮಾನದಲ್ಲಿ ವಿಶ್ವವನ್ನು ಹಿಂಸೆಯಲ್ಲಿ ಮುಳುಗಿಸಿ, ತಮ್ಮ ಮಾನ್ಯತೆ ಮತ್ತು ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಕೆಲವು ಜನರು ತೊಡಗಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ, ವಿಶ್ವದ ಎಲ್ಲ ಮಾನ್ಯತೆಗಳನ್ನು, ಸಂಪ್ರದಾಯಗಳನ್ನು, ಎಲ್ಲ ಸದ್ಮಾರ್ಗಗಳನ್ನು ತನ್ನೊಳಗೆ ಹುದುಗಿಸಿಕೊಂಡು ಏಕತೆಯ ಸೂತ್ರದಲ್ಲಿ ಒಂದಾಗಿರುವುದು ನಮ್ಮ ದೇಶ, ನಮ್ಮ ಭಾರತೀಯರು ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದಾಗಿದೆ. ಇದು ನಮ್ಮ ಪರಂಪರೆ, ಇದು ನಮ್ಮ ಶಕ್ತಿ. ಇದು ನಮ್ಮ ಉಜ್ವಲ ಭವಿಷ್ಯದ ಮಾರ್ಗವಾಗಿದ್ದು ಸಹೋದರ, ಸಹೋದರಿಯರ ಪ್ರೀತಿಯನ್ನು ಯಾರೂ ಅಳೆಯಲು ಸಾಧ್ಯವಿಲ್ಲ. ಸಹೋದರ ಸಹೋದರಿಯರು ಪರಸ್ಪರ ತ್ಯಾಗ ಮಾಡುವುದು ಸಹಜ, ಸ್ವಾಭಾವಿಕ ಪ್ರವೃತ್ತಿಯಾಗಿದೆ. ಹೀಗಿದ್ದಾಗ್ಯೂ ಕೂಡಾ ಈ ಸಂಸ್ಕಾರವನ್ನು ವೃದ್ಧಿಸಲು ನಾವು ರಕ್ಷಾಬಂಧನವನ್ನು ಆಚರಿಸುತ್ತೇವೆ. ಪ್ರತಿ ವರ್ಷ ಸಹೋದರ ಸಹೋದರಿಯರ ಸಂಬಂಧ ವೃದ್ಧಿಯ ಪ್ರಯತ್ನಗಳನ್ನು ಮಾಡುತ್ತೇವೆ. ದೇಶದ ಏಕತೆ, ದೇಶದ ಸಾಂಸ್ಕೃತಿಕ ಪರಂಪರೆ ಬಲಿಷ್ಠವಾಗಿದ್ದಾಗಲೂ ಕೂಡಾ ಪ್ರತಿ ಬಾರಿಯೂ ಅದನ್ನು ಪುನ: ಜಾಗೃತಗೊಳಿಸಬೇಕಾದ್ದು ಅತ್ಯವಶ್ಯಕ. ಪುನ: ಪುನ: ಏಕತೆಯ ಮಂತ್ರವನ್ನು ಪುನರುಚ್ಚರಿಸಬೇಕಾದು ಆವಶ್ಯಕವಾಗಿದೆ. ಏಕತೆಯಿಂದ ಬಾಳುವ ಸಂಕಲ್ಪವನ್ನು ಮಾಡಬೇಕಾದು ಅವಶ್ಯಕವಾಗಿದೆ.
 
ದೇಶ ವಿಶಾಲವಾಗಿದೆ. ಪೀಳಿಗೆಗಳು ಬದಲಾಗುತ್ತ ಇರುತ್ತವೆ. ಇತಿಹಾಸದ ಪ್ರತಿಯೊಂದು ಘಟನೆಗಳೂ ನೆನಪಿರುವುದಿಲ್ಲ. ವಿವಿಧತೆಗಳಿಂದ ಕೂಡಿರುವ ಭಾರತದಂತಹ ದೇಶದಲ್ಲಿ ಪ್ರತಿಯೊಂದು ಕ್ಷಣವೂ ಏಕತೆಯ ಮಂತ್ರವನ್ನು ಪಠಿಸಬೇಕಾದ್ದು, ಪ್ರತಿಯೊಂದು ಕ್ಷಣವೂ ಏಕತೆಯ ಹಾದಿಯನ್ನು ಗುರುತಿಸುವುದು, ಪ್ರತಿಯೊಂದು ಕ್ಷಣವೂ ಏಕತೆಯನ್ನು ಬಲಿಷ್ಠವನ್ನಾಗಿಸುವ ವಿಧಾನಗಳಿಂದ ಬೆಸೆದುಕೊಳ್ಳುವುದು ಭಾರತದಂತಹ ದೇಶಕ್ಕೆ ಅನಿವಾರ್ಯವಾಗಿದೆ. ನಮ್ಮ ದೇಶ ಒಂದಾಗಿರಲಿ, ಅಖಂಡವಾಗಿರಲಿ. ಸರ್ದಾರ್ ಸಾಹೇಬರು ನಮಗೆ ನೀಡಿದ ದೇಶದ ಏಕತೆ ಮತ್ತು ಅಖಂಡತೆ ಕಾಪಾಡಬೇಕಾದ್ದು ದೇಶದ 125 ಕೋಟಿ ಭಾರತೀಯರ ಕರ್ತವ್ಯ. ದೇಶದ ಏಕತೆಗಾಗಿ ಭಗೀರಥ ಪ್ರಯತ್ನ ಮಾಡಿದಂತ ಸರ್ದಾರ್ ಪಟೇಲ್ ಅವರ ಸ್ಮರಣೆ ಮಾಡಿಕೊಳ್ಳುವುದು 125 ಕೋಟಿ ಭಾರತೀಯರ ಜವಾಬ್ಧಾರಿಯಾಗಿದೆ.  ಯಾವ ರೀತಿ ಅವರು ದೇಶವನ್ನು ಒಂದು ಮಾಡಿದರು ಎಂಬುದು ಪ್ರತಿಯೊಂದು ಪೀಳಿಗೆಗೂ ಅರಿವಾಗಬೇಕು ಎಂಬ ಉದ್ದೇಶದಿಂದ ಇಂದು ಅಕ್ಟೋಬರ್ 31 ರಂದು ಸರ್ದಾರ್ ಪಟೇಲ್ ಅವರ ಜಯಂತಿಯನ್ನು ನಾವು ಆಚರಿಸುತ್ತಿದ್ದೇವೆ. ಎಂಟು ವರ್ಷಗಳ ನಂತರ ಸರ್ದಾರ್ ಪಟೇಲ್ ಅವರ 150ನೇ ಜನ್ಮದಿನವಾಗಿದ್ದು, ಈ 150ನೇ ವರ್ಷಕ್ಕೆ ನಾವು ದೇಶದ ಏಕತೆಗಾಗಿ ಯಾವ ಹೊಸ ಉದಾಹರಣೆಗಳನ್ನು ನೀಡಬಹುದು. ಜನರಲ್ಲಿ ಏಕತೆಯ ಭಾವನೆಯನ್ನು ಹೇಗೆ ಬಲಪಡಿಸಬಹುದು ಎಂಬ ಸಂಕಲ್ಪವನ್ನಿಟ್ಟುಕೊಂಡು ನಾವು ಮುಂದುವರೆಯಬೇಕಿದೆ. 
 
2022ಕ್ಕೆ ದೇಶದ ಸ್ವಾತಂತ್ರಕ್ಕೆ 75 vವರ್ಷಗಳಾಗಲಿದೆ. ಭಗತ್ ಸಿಂಗ್, ರಾಜ್ ಗುರು, ಸುಖ್ ದೇವ್. ನೇತಾಜಿ ಸುಭಾಷ್ ಚಂದ್ರ ಬೋಸ್, ಮಹಾತ್ಮಾ ಗಾಂಧಿ, ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಹೀಗೆ ಅಸಂಖ್ಯಾತ ದೇಶಭಕ್ತರು, ದೇಶಕ್ಕಾಗಿ ಬದುಕಿದರು, ದೇಶಕ್ಕಾಗಿ ತಮ್ಮ ಜೀವವನ್ನು ತ್ಯಾಗ ಮಾಡಿದರು. 2022ಕ್ಕೆ ದೇಶದ ಸ್ವಾತಂತ್ರಕ್ಕೆ 75 ವರ್ಷಗಳಾಗಲಿದ್ದು, ನಾವು ನಮ್ಮ ಹೃದಯದಲ್ಲಿ ಒಂದು ಸಂಕಲ್ಪವನ್ನು ಮಾಡಿಕೊಳ್ಳಬೇಕಿದ್ದು, ಆ ಸಂಕಲ್ಪ ಸಿದ್ಧಿಗಾಗಿ ನಾವೆಲ್ಲರೂ ಒಂದಾಗಬೇಕಿದೆ. ಪ್ರತಿಯೊಬ್ಬ ಭಾರತೀಯರಿಗೂ ಒಂದು ಸಂಕಲ್ಪವಿರಬೇಕು. ಪ್ರತಿಯೊಬ್ಬ ಭಾರತೀಯರೂ ತಮ್ಮ ಸಂಕಲ್ಪವನ್ನು ಪೂರ್ಣ ಮಾಡಿಕೊಳ್ಳಲು ಸತತ ಪ್ರಯತ್ನಗಳನ್ನು ಮಾಡಬೇಕು. ಆ ಸಂಕಲ್ಪ ಸಮಾಜದ ಒಳಿತಿಗಾಗಿ ಇರಬೇಕು. ಆ ಸಂಕಲ್ಪ ದೇಶದ ಕಲ್ಯಾಣಕ್ಕಾಗಿ ಇರಬೇಕು. ದೇಶದ ಗೌರವವನ್ನು ಎತ್ತಿ ಹಿಡಿಯುವ ಸಂಕಲ್ಪವಾಗಬೇಕು. ಈ ಸಂಕಲ್ಪದ ಮೂಲಕ ನಾವೆಲ್ಲರೂ ಒಂದಾಗಬೇಕು. ಭಾರತೀಯ ಸ್ವಾತಂತ್ರದ ವೀರ ಪುತ್ರ ಸರ್ದಾರ್ ಪಟೇಲ್ ಅವರ ಜನ್ಮದಿನದಂದು 2022ಕ್ಕೆ  ನಾವು ಸಂಕಲ್ಪವೊಂದನ್ನು ಮಾಡಬೇಕಿದೆ, ಇದು ಸಮಯದ ಬೇಡಿಕೆಯೂ ಕೂಡಾ ಆಗಿದೆ. 
 
ತಾವು ಇಷ್ಟು ಅಧಿಕ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿದ್ದೀರಿ. ಉಲ್ಲಾಸ ಮತ್ತು ಉತ್ಸಾಹದಿಂದ ತಾವು ಇದರಲ್ಲಿ ಭಾಗಿಯಾಗಿದ್ದೀರಿ. ದೇಶಾದ್ಯಂತ ಯುವಜನತೆ ಒಂದುಗೂಡಿದ್ದಾರೆ. ರಾಷ್ಟ್ರೀಯ ಏಕತಾ ದಿನದ ಶಪಥ ಮಾಡಲು ನಾನು ತಮ್ಮೆಲ್ಲರನ್ನೂ ಆಹ್ವಾನಿಸುತ್ತೇನೆ. ನಾವುಗಳೆಲ್ಲರೂ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಅವರ ಪುಣ್ಯ ಸ್ಮರಣೆ ಮಾಡುತ್ತಾ, ನಾನು ತಮ್ಮ ಮುಂದೆ ಪ್ರಸ್ತುತ ಪಡಿಸುವ ಶಪಥವನ್ನು, ತಾವು ಪುನರುಚ್ಚರಿಸಿ, ಕೇವಲ ಮಾತಿನಿಂದ ಅಲ್ಲ, ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡು ಶಪಥವನ್ನು ಸ್ವೀಕರಿಸಿ. ಈ ಭಾವನೆಯಿಂದ ನಾವೆಲ್ಲರೂ ಇದನ್ನು ಪುನರುಚ್ಚರಿಸೋಣ. ತಾವೆಲ್ಲರೂ ತಮ್ಮ ಬಲಗೈಯನ್ನು ಮುಂದೆ ಮಾಡಿ ನನ್ನ ಈ ಮಾತುಗಳನ್ನು ಪುನರುಚ್ಚರಿಸಿ. “ನಾನು ರಾಷ್ಟ್ರದ ಏಕತೆ, ಅಖಂಡತೆ ಹಾಗೂ ಸುರಕ್ಷೆಯನ್ನು ಕಾಪಾಡಲು ನನ್ನನ್ನು ನಾನು ಸಮರ್ಪಣೆ ಮಾಡಿಕೊಳ್ಳುತ್ತೇನೆ ಹಾಗೂ ಈ ಸಂದೇಶವನ್ನು ಸಂಪೂರ್ಣ ದೇಶವಾಸಿಗಳಿಗೆ ತಲುಪಿಸುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತೇನೆ. ನಾನು ಈ ಶಪಥವನ್ನು ದೇಶದ ಏಕತೆಯ ಭಾವನೆಯಿಂದ ಸ್ವೀಕರಿಸುತ್ತಿದ್ದೇನೆ. ಇದು ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಅವರ ದೂರದೃಷ್ಟಿ ಮತ್ತು ಕಾರ್ಯಗಳಿಂದ ಸಾಧ್ಯವಾಗಿದೆ.  ನಾನು ದೇಶದ ಆಂತರಿಕ ಸುರಕ್ಷೆಯನ್ನು ಕಾಪಾಡುವುದಕ್ಕಾಗಿ ನನ್ನ ಕೊಡುಗೆಯನ್ನು ನೀಡುತ್ತೇನೆಂದು ಸತ್ಯ ಮತ್ತು ನಿಷ್ಠೆಯಿಂದ ಶಪಥ ಮಾಡುತ್ತೇನೆ”,
 
ಭಾರತ ಮಾತೆಗೆ ಜಯವಾಗಲಿ
 
ಭಾರತ ಮಾತೆಗೆ ಜಯವಾಗಲಿ
 
ಭಾರತ ಮಾತೆಗೆ ಜಯವಾಗಲಿ
 
ಎಲ್ಲರಿಗೂ ಧನ್ಯವಾದಗಳು.