independenceday-2016

Press Information Bureau

Government of India

President's Secretariat

ದೇಶದ 71ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್ 14, 2017 ರಂದು ಘನತೆವೆತ್ತ ರಾಷ್ಟ್ರಪತಿಗಳು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದ ಪೂರ್ಣಪಾಠ.

Posted On :14, August 2017 19:44 IST

ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ತೊಡಗಿರುವ ನನ್ನ ಸಹನಾಗರಿಕರೇ,

ನಮ್ಮ ದೇಶವು ಸ್ವಾತಂತ್ರ್ಯದ 70 ವಸಂತಗಳನ್ನು ಪೂರೈಸುತ್ತಿರುವ ಈಶುಭಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಶುಭಾಶಯಗಳು.

ನಮ್ಮ ದೇಶವು ನಾಳೆ 71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಿದೆ. ನಾನುನಿಮ್ಮೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಕಾಮನೆಗಳನ್ನು ಹೇಳುತ್ತಿದ್ದೇನೆ.

1947ರ ಆಗಸ್ಟ್ 15ರಂದು ನಮ್ಮ ದೇಶವು ಸ್ವತಂತ್ರವಾಯಿತು. ಈ ಮೂಲಕಬ್ರಿಟಿಷರ ಕೈಯಲ್ಲಿದ್ದ ಸಾರ್ವಭೌಮತ್ವ ಮತ್ತು ಹೊಣೆಗಾರಿಕೆಗಳೆಲ್ಲ ನಮ್ಮ ಜನರಕೈಗೇ ಬಂದವು. ಕೆಲವರು ಈ ಪ್ರಕ್ರಿಯೆಯನ್ನು `ಅಧಿಕಾರದ ಬದಲಾವಣೆ' ಎಂದುಬಣ್ಣಿಸಿದ್ದಾರೆ.

ಆದರೆ, ಇದು ಕೇವಲ ಅಷ್ಟೇ ಅಲ್ಲ. ಬದಲಿಗೆ ಆ ಪ್ರಕ್ರಿಯೆಯು ನಮ್ಮ ಹಿರಿಯರೂಸ್ವಾತಂತ್ರ್ಯ ಹೋರಾಟಗಾರರೂ ಕಂಡ ಕನಸು ಕೈಗೂಡಿದ ಕ್ಷಣವಾಗಿತ್ತು. ಈಮೂಲಕ, ನಮ್ಮ ದೇಶವನ್ನು ಹೊಸದಾಗಿ ಕಲ್ಪಿಸಿಕೊಳ್ಳುವ ಮತ್ತು ಕಟ್ಟುವ ಮುಕ್ತಅವಕಾಶ ನಮ್ಮದಾಯಿತು.

ಸ್ವಾತಂತ್ರ್ಯದ ಈ ಕನಸು ನಮ್ಮ ಸಾಮಾನ್ಯ ಹಳ್ಳಿಗಳಲ್ಲಿ, ಬಡವರ ಮತ್ತು ಅವಕಾಶವಂಚಿತರನ್ನು ಮೇಲಕ್ಕೆತ್ತುವುದರಲ್ಲಿ ಮತ್ತು ದೇಶದ ಸರ್ವಾಂಗೀಣ ವಿಕಾಸದಲ್ಲಿ ತನ್ನಬೇರುಗಳನ್ನು ಹೊಂದಿತ್ತು ಎನ್ನುವುದನ್ನು ತಿಳಿದುಕೊಳ್ಳಬೇಕಾದ್ದು ತುಂಬಾ ಮುಖ್ಯ.

ಇದಕ್ಕಾಗಿ ನಾವು, ಬ್ರಿಟಿಷರ ವಿರುದ್ಧ ಹೋರಾಡಿ, ಅಪಾರ ತ್ಯಾಗ ಮಾಡಿ, ನಾವುಇಂದು ಈ ಸ್ಥಿತಿಗೆ ಬರಲು ಕಾರಣರಾದ ದೇಶದ ಅಸಂಖ್ಯಾತ ಸ್ವಾತಂತ್ರ್ಯಹೋರಾಟಗಾರರಿಗೆ ಋಣಿಯಾಗಿದ್ದೇವೆ.

ಇದಕ್ಕೆ ಸಾಕ್ಷಿಯಾಗಿ ನಾವು ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕ್ವಿಟ್ ಇಂಡಿಯಾ ಚಳವಳಿಯ ನಾಯಕಿ ಮತ್ತು ಹುತಾತ್ಮ ಧೀರೆ ಮಾತಾಂಗಿನಿ ಹಜ್ರಾಅವರನ್ನು ನಾವು ನೋಡಬಹುದು. ಇವು, ನಾನು ನೀಡುತ್ತಿರುವ ಕೆಲವುಉದಾಹರಣೆಗಳಷ್ಟೆ. ಈ ನಿಟ್ಟಿನಲ್ಲಿ ಇಂಥ ಅನೇಕ ನಿದರ್ಶನಗಳಿವೆ.

ಕ್ವಿಟ್ ಇಂಡಿಯಾ ಚಳವಳಿಯ ಸಮಯದಲ್ಲಿ ಮಾತಾಂಗಿನಿ ಹಜ್ರಾ ಅವರಾಗಲೇ 70 ವರ್ಷವನ್ನು ದಾಟಿದ್ದರು. ಬಂಗಾಳದ ತಮ್ಲೂಕ್ನಲ್ಲಿ ಶಾಂತಿಯುತ ಪ್ರತಿಭಟನಾಪ್ರದರ್ಶನವನ್ನು ಮುನ್ನಡೆಸುತ್ತಿದ್ದ ಈ ಧೀರ ಮಹಿಳೆಯನ್ನು ಬ್ರಿಟಿಷ್ ಪೊಲೀಸರುಗುಂಡಿಟ್ಟು ಕೊಂದರು. ತಮ್ಮ ಹೃದಯದಲ್ಲಿ ಸ್ವತಂತ್ರ ಭಾರತದ ಭರವಸೆಯನ್ನುಹೊಂದಿದ್ದ ಅವರು, `ವಂದೇ ಮಾತರಂ' ಎನ್ನುತ್ತ ಕೊನೆಯುಸಿರೆಳೆದರು.

ಸರ್ದಾರ್ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ರಾಮ್ ಪ್ರಸಾದ್ ಬಿಸ್ಮಿಲ್, ಅಷ್ಫಾಖುಲ್ಲಾ ಖಾನ್, ಬಿರ್ಸಾ ಮುಂಡಾ ಮತ್ತು ಇಂಥ ಇನ್ನೂ ಸಾವಿರಾರು ಮಂದಿನಮಗೋಸ್ಕರ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಇವರನ್ನೆಲ್ಲ ನಾವು ಎಂದಿಗೂಮರೆಯಲಾರೆವು.

ಸ್ವಾತಂತ್ರ್ಯ ಹೋರಾಟದ ಆರಂಭದಿಂದಲೂ ಕ್ರಾಂತಿಕಾರಿ ನಾಯಕರ ದಂಡೇನಮ್ಮಲ್ಲಿತ್ತು. ಅವರೆಲ್ಲರೂ ನಮ್ಮ ದೇಶವನ್ನು ಸರಿಯಾದ ದಿಕ್ಕಿನಲ್ಲಿ ನಡೆಸಿದ್ದಾರೆ.

ಅವರೆಲ್ಲರೂ ಕೇವಲ ರಾಜಕೀಯ ಸ್ವಾತಂತ್ರ್ಯದ ಬಗ್ಗೆಯಷ್ಟೇ ಮಾತನಾಡಲಿಲ್ಲಎನ್ನುವುದನ್ನು ನಾವು ಗಮನಿಸಬೇಕು. ಮಹಾತ್ಮ ಗಾಂಧೀಜಿಯವರಂತೂ ಭಾರತವುಬೆಳೆಸಿಕೊಳ್ಳಬೇಕಾದ ನೈತಿಕ ಚಾರಿತ್ರ್ಯಕ್ಕೆ ತುಂಬಾ ಒತ್ತು ಕೊಟ್ಟಿದ್ದರು. ಗಾಂಧೀಜಿಯವರು ಯಾವ ತತ್ವಗಳ ಬಗ್ಗೆ ಮಾತನಾಡಿದರೋ, ಅವು ಇಂದಿಗೂಪ್ರಸ್ತುತವಾಗಿವೆ.

ಸ್ವಾತಂತ್ರ್ಯ ಮತ್ತು ಸುಧಾರಣೆಗಳಿಗಾಗಿ ದೇಶಾದ್ಯಂತ ನಡೆದ ಈ ಹೋರಾಟದಲ್ಲಿಗಾಂಧೀಜಿಯವರ ಜತೆಗೆ ಇನ್ನೂ ಹಲವು ಧೀಮಂತ ನಾಯಕರಿದ್ದರು. ಸುಭಾಷಚಂದ್ರಬೋಸ್ ಅವರು ಜನರಿಗೆ ``ನೀವು ನನಗೆ ರಕ್ತ ಕೊಡಿ, ನಾನು ನಿಮಗೆಸ್ವಾತಂತ್ರ್ಯವನ್ನು ಕೊಡುತ್ತೇನೆ,'' ಎಂದು ಕರೆ ಕೊಟ್ಟರು. ಅವರ ಆ ಕರೆಗೆಲಕ್ಷಾಂತರ ಭಾರತೀಯರು ಓಗೊಟ್ಟು, ಅವರ ನಾಯಕತ್ವದಲ್ಲಿ ಸ್ವಾತಂತ್ರ್ಯಹೋರಾಟಕ್ಕೆ ಧುಮುಕಿ, ತಮ್ಮ ಸರ್ವಸ್ವವನ್ನೂ ಅದಕ್ಕೆ ಧಾರೆ ಎರೆದರು.

ಇನ್ನು ಜವಾಹರಲಾಲ್ ನೆಹರು ಅವರು, ನಮಗೆ ತುಂಬಾ ಆಪ್ತವಾದ ಪುರಾತನಪರಂಪರೆ ಮತ್ತು ಸಂಪ್ರದಾಯಗಳು ಹಾಗೂ ತಂತ್ರಜ್ಞಾನ ಮತ್ತು ಆಧುನಿಕಭಾರತಗಳೆರಡೂ ಜತೆಜತೆಯಲ್ಲೇ ಇರಬಹುದೆಂಬ ಅಂಶಕ್ಕೆ ಒತ್ತು ಕೊಟ್ಟರು.

ಸರ್ದಾರ್ ವಲ್ಲಭಭಾಯಿ ಪಟೇಲರು ನಮ್ಮಲ್ಲಿ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯಭಾವವನ್ನು ಬಿತ್ತಿದರು. ಇದರ ಜತೆಗೆ ಅವರು, ಅಚ್ಚುಕಟ್ಟಾದ ರಾಷ್ಟ್ರೀಯ ಚಾರಿತ್ರ್ಯದಮಹತ್ವವನ್ನೂ ನಮಗೆ ತೋರಿಸಿಕೊಟ್ಟರು.

ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರು ನಮಗೆ ಸಾಂವಿಧಾನಿಕ ಆಡಳಿತ, ಶಾಸನಾತ್ಮಕ ಆಳ್ವಿಕೆ, ಮತ್ತು ಶೈಕ್ಷಣಿಕ ಅಗತ್ಯದ ಮೌಲ್ಯಗಳನ್ನು ಒತ್ತಿ ಹೇಳಿದರು.

ನಮ್ಮಲ್ಲಿದ್ದ ಅಸಂಖ್ಯಾತ ಧೀಮಂತರ ಪೈಕಿ ನಾನಿಲ್ಲಿ ಕೆಲವೇ ಕೆಲವುಉದಾಹರಣೆಗಳನ್ನಷ್ಟೆ ಹೇಳುತ್ತಿದ್ದೇನೆ. ಮನಸ್ಸು ಮಾಡಿದರೆ, ನಾನು ಇನ್ನೂಸಾಕಷ್ಟು ನಿದರ್ಶನಗಳನ್ನು ಕೊಡಬಹುದು. ಒಟ್ಟಿನಲ್ಲಿ, ನಮಗೆ ಸ್ವಾತಂತ್ರ್ಯವನ್ನುತಂದುಕೊಟ್ಟ ಆ ತಲೆಮಾರು ನಿಜಕ್ಕೂ ವೈವಿಧ್ಯಮಯವಾಗಿತ್ತು. ಸ್ವಾತಂತ್ರ್ಯಹೋರಾಟದಲ್ಲಿ ಬಗೆಬಗೆಯ ಮಹಿಳೆಯರು ಮತ್ತು ಮಹನೀಯರು ದೇಶದಉದ್ದಗಲವನ್ನೂ ವೈವಿಧ್ಯಮಯವಾದ ರಾಜಕೀಯ ಮತ್ತು ಸಾಮಾಜಿಕಚಿಂತನೆಯನ್ನೂ ಪ್ರತಿನಿಧಿಸಿದ್ದರು.

ಇಂಥ ಅಪ್ರತಿಮ ಧೈರ್ಯವಂತರಾಗಿದ್ದ ಸ್ವಾತಂತ್ರ್ಯ ಹೋರಾಟಗಾರರಿಂದ ನಾವುಸ್ಫೂರ್ತಿಯನ್ನು ಪಡೆದುಕೊಳ್ಳಬೇಕಾಗಿದೆ. ಏಕೆಂದರೆ, ಈ ಹೋರಾಟಗಾರರಲ್ಲಿಎಷ್ಟೋ ಜನ ದೇಶದ ಸಲುವಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ನಾವು ಇಂದಿಗೂ ಇಂಥ ಚೈತನ್ವವನ್ನುಪ್ರದರ್ಶಿಸಬೇಕಾಗಿದೆ.

ನೀತಿನಿರೂಪಣೆ ಮತ್ತು ಕೆಲಸಕಾರ್ಯಗಳಲ್ಲಿ ನೈತಿಕತೆಗೆ ಒತ್ತು, ಪರಂಪರೆ ಮತ್ತುವಿಜ್ಞಾನಗಳ ಬೆಸುಗೆಯಲ್ಲಿ ನಂಬಿಕೆ, ಕಾನೂನುಬದ್ಧ ಆಡಳಿತ ಮತ್ತು ಶಿಕ್ಷಣಗಳಿಗೆಉತ್ತೇಜನ- ಇವೆಲ್ಲವೂ ನಾಗರಿಕರು ಮತ್ತು ಸರಕಾರಗಳ ನಡುವಿನ ಸಹಭಾಗಿತ್ವದಲ್ಲಿಮಿಳಿತವಾಗಿವೆ.

ನಮ್ಮ ದೇಶವನ್ನು ಕಟ್ಟಿರುವುದೇ ಹೀಗೆ. ಅಂದರೆ, ಇದು ನಾಗರಿಕರು ಮತ್ತುಸರಕಾರ, ವ್ಯಕ್ತಿಗಳು ಮತ್ತು ಸಮಾಜ, ಹಾಗೂ ಕುಟುಂಬ ಮತ್ತು ಬೃಹತ್ಸಮುದಾಯಗಳ ನಡುವಿನ ಬೆಸುಗೆಯಿಂದ ಸಾಧ್ಯವಾಗಿದೆ.

ಸಹನಾಗರಿಕರೇ,

ನನಗಿಲ್ಲಿ ನನ್ನ ಬಾಲ್ಯದ ಒಂದು ಸಂಪ್ರದಾಯ ನೆನಪಿಗೆ ಬರುತ್ತಿದೆ. ಅದೇನೆಂದರೆ, ಆಗೆಲ್ಲ ಊರಲ್ಲೊಂದು ಮದುವೆ ನಡೆದರೆ ಅದು ಆ ಇಡೀ ಊರಿಗೆ ಸಂಬಂಧಿಸಿದಸಂಭ್ರಮವಾಗಿರುತ್ತಿತ್ತು. ಅಂದರೆ, ಮದುವೆಗೆ ಸಂಬಂಧಿಸಿದ ಕೆಲಸಕಾರ್ಯಗಳನ್ನೆಲ್ಲಇಡೀ ಊರಿನ ಜನ ಹಂಚಿಕೊಳ್ಳುತ್ತಿದ್ದರು. ಈ ವಿಷಯದಲ್ಲಿ ಯಾರೂ ಜಾತಿ-ಜನಾಂಗಗಳ ಮುಖ ನೋಡುತ್ತಿರಲಿಲ್ಲ. ಹೀಗಾಗಿ, ಮದುವೆಯಾಗಲಿದ್ದ ಹೆಣ್ಣುಮಗಳು ಯಾವುದೋ ಒಂದು ಕುಟುಂಬದ ಮಗಳಾಗಿರುತ್ತಿರಲಿಲ್ಲ; ಬದಲಿಗೆ, ಇಡೀಊರಿನ ಪಾಲಿಗೆ ಆಕೆ ಮಗಳಾಗಿ ಬಿಡುತ್ತಿದ್ದರು.

ಅಕ್ಕಪಕ್ಕದ ಮನೆಯವರು ಮತ್ತು ಊರಿನ ಉಳಿದವರೆಲ್ಲ ಈ ಮದುವೆ-ಮುಂಜಿಗಳಿಗೆಬರುತ್ತಿದ್ದ ಅತಿಥಿಗಳನ್ನು ಉಪಚರಿಸುತ್ತಿದ್ದರು, ಬೇರೆಬೇರೆ ಕೆಲಸಗಳನ್ನುವಹಿಸಿಕೊಳ್ಳುತ್ತಿದ್ದರು. ಜತೆಗೆ, ಮದುವೆಯ ಖರ್ಚಿಗೆಂದು ಅದೆಷ್ಟೋ ಮನೆಯವರುಕೈಯೆತ್ತಿ ಸಹಾಯ ಧನಸಹಾಯ ಮಾಡುತ್ತಿದ್ದರು. ಒಂದು ಕುಟುಂಬವು ದವಸ-ಧಾನ್ಯಗಳನ್ನು ಕಳುಹಿಸಿದರೆ, ಇನ್ನೊಂದು ಕುಟುಂಬವು ತರಕಾರಿಯನ್ನುಕಳಿಸಿಕೊಡುತ್ತಿತ್ತು; ಹಾಗೆಯೇ, ಮತ್ತೊಂದು ಕುಟುಂಬವು ಮದುವೆಗೆ ಬೇಕಾದಬೇರಾವುದೋ ಅಗತ್ಯ ವಸ್ತುವನ್ನು ಪೂರೈಸುತ್ತಿತ್ತು.

ಒಟ್ಟಿನಲ್ಲಿ ಆಗ ಹೀಗೆ ಒಬ್ಬರನ್ನೊಬ್ಬರು ಆತುಕೊಳ್ಳುವ ಮತ್ತು ಜವಾಬ್ದಾರಿಯನ್ನುಹಂಚಿಕೊಳ್ಳುವ ಹಾಗೂ ಪರಸ್ಪರ ಅವಲಂಬಿಸಿಕೊಳ್ಳುವ ಪ್ರವೃತ್ತಿ ಇತ್ತು. ನಾವುಒಬ್ಬರಿಗೆ ಒಂದು ಸಂದರ್ಭದಲ್ಲಿ ಒದಗಿ ಬಂದರೆ, ಅವರು ನಮ್ಮ ಕಷ್ಟ-ಸುಖಗಳಲ್ಲಿನಮಗೂ ಒದಗಿಬರುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿತ್ತು.

ಆದರೆ, ಇವತ್ತು ಏನಾಗಿದೆಯೆಂದರೆ, ದೊಡ್ಡದೊಡ್ಡ ನಗರಗಳಲ್ಲಿ ನಮ್ಮ ಅಕ್ಕಪಕ್ಕದಮನೆಯವರೂ ಸಹ ನಮಗೆ ಗೊತ್ತಿಲ್ಲದಂತಾಗಿದೆ. ನಗರವೇ ಇರಲಿ, ಹಳ್ಳಿಯೇಇರಲಿ, ಹಿಂದೆ ಇದ್ದ ಈ ಆತುಕೊಳ್ಳುವ, ಒಬ್ಬರಿಗೊಬ್ಬರು ಒದಗಿ ಬರುವಸಂಪ್ರದಾಯವನ್ನು ನಾವು ಪುನಃ ರೂಢಿಗೆ ತರುವುದು ಮುಖ್ಯವಾಗಿದೆ. ಇದುನಮ್ಮನ್ನು ಇನ್ನಷ್ಟು ಸಭ್ಯರನ್ನಾಗಿಸುತ್ತದೆ. ಅಲ್ಲದೆ, ಇದರಿಂದ ನಮ್ಮ ಸಮಾಜಇನ್ನಷ್ಟು ಸಂತೋಷದಾಯಕವಾಗಿರುತ್ತದೆ ಮತ್ತು ನಾವೆಲ್ಲರೂ ಒಬ್ಬರನ್ನೊಬ್ಬರುಮತ್ತಷ್ಟು ಸಹಾನುಭೂತಿಯಿಂದ ಅರಿತುಕೊಳ್ಳಲು ಸಹಾಯವಾಗುತ್ತದೆ.

ಸಹನಾಗರಿಕರೇ,

ಭಾರತದಲ್ಲಿ ಈ ಸಹಾನುಭೂತಿ, ಸಾಮಾಜಿಕ ಸೇವೆ ಮತ್ತು ಸ್ವಯಂಸ್ಫೂರ್ತಿಯಿಂದಇನ್ನೊಬ್ಬರ ಸೇವೆ ಮಾಡುವ ತತ್ವಗಳು ಇಂದಿಗೂ ಜೀವಂತವಾಗಿವೆ. ಬಡವರ ಮತ್ತುಅವಕಾಶ ವಂಚಿತರ ಒಳಿತಿಗಾಗಿ ಸದ್ದಿಲ್ಲದೆ ಸೇವೆ ಮಾಡುತ್ತಿರುವ ಅದೆಷ್ಟೋ ಜನರುಮತ್ತು ಸಂಸ್ಥೆಗಳು ನಮ್ಮಲ್ಲಿವೆ.

ಇಂಥವರು ಬೀದಿ ಮಕ್ಕಳ ಸಲುವಾಗಿ ಶಾಲೆ ನಡೆಸುತ್ತಿರಬಹುದು, ಬೀಡಾಡಿಪ್ರಾಣಿಪಕ್ಷಿಗಳ ಆರೈಕೆ ಮಾಡುತ್ತಿರಬಹುದು, ತೀರಾ ಹಿಂದುಳಿದ ಪ್ರದೇಶಗಳಲ್ಲಿರುವಬುಡಕಟ್ಟು ಜನರಿಗೆ ನೀರನ್ನು ಒದಗಿಸುತ್ತಿರಬಹುದು, ಅಥವಾ ನದಿಗಳನ್ನೂಸಾರ್ವಜನಿಕ ಸ್ಥಳಗಳನ್ನೂ ಶುಚಿಗೊಳಿಸುತ್ತಿರಬಹುದು. ಒಟ್ಟಿನಲ್ಲಿ ಇವರೆಲ್ಲರಾಷ್ಟ್ರನಿರ್ಮಾಣದ ಕಾಯಕದಲ್ಲಿ ತೊಡಗಿದ್ದು, ನಾವು ಇಂಥವರಿಂದ ಪ್ರೇರಣೆಪಡೆಯಬೇಕಾದುದು ಅಗತ್ಯವಾಗಿದೆ.

ಸರಕಾರಗಳು ಅನೇಕ ನೀತಿಗಳನ್ನು ರೂಪಿಸುತ್ತದೆ, ನಿಜ. ಇವೆಲ್ಲವೂ ಸಮಾಜದಎಲ್ಲರನ್ನೂ ತಲುಪಬೇಕಾದರೆ ನಾವು ಒಗ್ಗಟ್ಟಿನಿಂದಲೂ ಸ್ಪಷ್ಟ ಗುರಿಯೊಂದಿಗೂ ಕೆಲಸಮಾಡಬೇಕು. ಇದು ಸಾಧ್ಯವಾಗಬೇಕೆಂದರೆ, ನಾಗರಿಕರು ಮತ್ತು ಸರಕಾರಗಳನಡುವೆ ಸಹಭಾಗಿತ್ವ ಅಗತ್ಯವಾಗಿದೆ.

* ಸರಕಾರವು `ಸ್ವಚ್ಛ ಭಾರತ' ಆಂದೋಲನವನ್ನು ಆರಂಭಿಸಿದೆ, ನಿಜ. ಆದರೆ, ನಾವೆಲ್ಲರೂ ಸ್ವಚ್ಛ ಭಾರತದ ಭರವಸೆಯನ್ನು ನೀಡಬೇಕು.

* ಸರಕಾರವು ಶೌಚಾಲಯಗಳನ್ನು ತಾನೂ ನಿರ್ಮಿಸುತ್ತಿದ್ದು, ಈ ನಿಟ್ಟಿನಲ್ಲಿಇತರರಿಗೂ ನೆರವು ನೀಡುತ್ತಿದೆ. ಆದ್ದರಿಂದ, ಈ ಶೌಚಾಲಯಗಳನ್ನುಬಳಸಿಕೊಂಡು, ಭಾರತವನ್ನು ಬಯಲುಶೌಚಮುಕ್ತ ದೇಶವನ್ನಾಗಿ ಮಾಡುವುದುನಮ್ಮೆಲ್ಲರ ಕರ್ತವ್ಯವಾಗಿದೆ.

* ಸರಕಾರವು ದೇಶದ ಉದ್ದಗಲಕ್ಕೂ ಸಂಪರ್ಕ ತಂತ್ರಜ್ಞಾನವನ್ನು ಒದಗಿಸುತ್ತಿದೆ. ಆದರೆ, ಅಂತರ್ಜಾಲವನ್ನು ಜ್ಞಾನಾರ್ಜನೆಗೆ, ಉಜ್ವಲ ಅವಕಾಶಗಳ ಸೃಷ್ಟಿಗೆ, ಶಿಕ್ಷಣದ ಮತ್ತು ಮಾಹಿತಿಯ ಲಭ್ಯತೆಯ ವಿಸ್ತರಣೆಗೆ ಬಳಸಿಕೊಳ್ಳುವುದು ನಮ್ಮಹೊಣೆಗಾರಿಕೆಯಾಗಿದೆ.

* ಸರಕಾರವು `ಹೆಣ್ಣು ಮಕ್ಕಳನ್ನು ಉಳಿಸಿ-ಹೆಣ್ಣು ಮಕ್ಕಳನ್ನು ಓದಿಸಿ' ಎನ್ನುವಆಂದೋಲನವನ್ನು ಹಮ್ಮಿಕೊಂಡಿದೆ. ಆದ್ದರಿಂದ, ನಮ್ಮ ಹೆಣ್ಣು ಮಕ್ಕಳಿಗೆ ಅತ್ಯುತ್ತಮಶಿಕ್ಷಣವನ್ನು ಕೊಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

* ಸರಕಾರವು ಕಾನೂನುಗಳನ್ನು ರೂಪಿಸಿ, ಅದನ್ನು ಕಟ್ಟುನಿಟ್ಟಾಗಿ ಜಾರಿಗೆತರಬಹುದು, ನಿಜ. ಆದರೆ, ಕಾನೂನುಬದ್ಧ ಪ್ರಜೆಗಳಾಗಿರುವುದು ಮತ್ತುಕಾನೂನುಬದ್ಧ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಕೆಲಸವಾಗಿದೆ.

* ಸರಕಾರವು ಪಾರದರ್ಶಕತೆಗೆ ಒತ್ತು ಕೊಡುತ್ತಿದ್ದು, ಸಾರ್ವಜನಿಕ ನೇಮಕಾತಿ/ಖರೀದಿಗಳಲ್ಲಿರುವ ಭ್ರಷ್ಟಾಚಾರವನ್ನು ಕಿತ್ತೊಗೆಯಲು ಪಣ ತೊಟ್ಟಿದೆ. ಆದರೆ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಇವೆರಡನ್ನೂ ನಾವು ನಿತ್ಯಜೀವನದಲ್ಲಿಕಾಪಾಡಿಕೊಂಡು, ನಮ್ಮ ಅಂತರಂಗ ಶುದ್ಧಿಯನ್ನು ಉಳಿಸಿಕೊಳ್ಳಬೇಕಾಗಿದೆ.

* ಸರಕಾರವು ಇದುವರೆಗೆ ಇದ್ದ ಬಹುಬಗೆಯ ತೆರಿಗೆಗಳನ್ನೆಲ್ಲ ಕಿತ್ತು ಹಾಕಿ, ಸರಳವ್ಯಾಪಾರ-ವಹಿವಾಟನ್ನು ಸಾಧ್ಯವಾಗಿಸುವಂಥ ಹೊಸ ಜಿಎಸ್ ಟಿ ವ್ಯವಸ್ಥೆಯನ್ನುಜಾರಿಗೆ ತರುತ್ತಿದೆ. ಆದರೆ, ಈ ರೀತಿಯ ಋಜುತ್ವ ನಮ್ಮೆಲ್ಲರ ಕೆಲಸಕಾರ್ಯಗಳಲ್ಲೂದಿನನಿತ್ಯದ ಬದುಕಿನಲ್ಲೂ ಇರುವಂತೆ ನಾವು ಎಚ್ಚರ ವಹಿಸಬೇಕು.

ಬಹುಬಗೆಯ ತೆರಿಗೆ ವ್ಯವಸ್ತೆಗೆ ವಿದಾಯ ಹೇಳಿ, ದೇಶವು ತುಂಬಾ ಸುಗಮವಾಗಿಜಿಎಸ್ ಟಿ ವ್ಯವಸ್ತೆಗೆ ಹೊರಳಿಕೊಂಡಿದ್ದನ್ನು ಕಂಡು ನನಗೆ ಸಂತೋಷವಾಗಿದೆ. ನಾವುಪಾವತಿಸುವ ಒಂದೊಂದು ಪೈಸೆ ತೆರಿಗೆಯನ್ನೂ ರಾಷ್ಟ್ರನಿರ್ಮಾಣ ಕಾರ್ಯಕ್ಕಾಗಿಬಳಸಿಕೊಳ್ಳುತ್ತಿರುವುದಕ್ಕೆ ನಾವೆಲ್ಲರೂ ಹೆಮ್ಮೆ ಪಡಬೇಕು. ಈ ಮೂಲಕ ಬಡವರಿಗೂಅಂಚಿನಲ್ಲಿರುವವರಿಗೂ ಸಹಾಯವಾಗುತ್ತಿದೆ; ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿಮೂಲಸೌಲಭ್ಯಗಳನ್ನು ನಿರ್ಮಿಸಲಾಗುತ್ತಿದೆ; ಜತೆಗೆ, ದೇಶದ ಗಡಿಗಳನ್ನುಸುಭದ್ರಗೊಳಿಸಲಾಗುತ್ತಿದೆ.

ಸಹನಾಗರಿಕರೇ,

ನಮ್ಮ ದೇಶವು 2022ರಲ್ಲಿ, ಅಂದರೆ ಇನ್ನು ಐದು ವರ್ಷಗಳಲ್ಲಿ 75ನೇಸ್ವಾತಂತ್ರ್ಯೋತ್ಸವವನ್ನು ಆಚರಿಸಲಿದೆ. ಅಷ್ಟು ಹೊತ್ತಿಗೆ, ನವಭಾರತನಿರ್ಮಾಣಕ್ಕಾಗಿ ನಾವು ಕೆಲವೊಂದು ಮೈಲುಗಲ್ಲುಗಳನ್ನು ನೆಡಬೇಕಾಗಿದೆ.

ನಾವೆಲ್ಲರೂ ನವಭಾರತದ ಬಗ್ಗೆ ಮಾತನಾಡುತ್ತೇವೆ. ಹಾಗಾದರೆ, ನವಭಾರತವೆಂದರೆ ಏನು? ನಿಜಕ್ಕೂ ಇದಕ್ಕೆ ಕೆಲವೊಂದು ನಿರ್ದಿಷ್ಟಮಾನದಂಡಗಳಿವೆ. ಅದೇನೆಂದರೆ, ದೇಶದ ಪ್ರತಿಯೊಂದು ಕುಟುಂಬಕ್ಕೂವಾಸಯೋಗ್ಯವಾದ ಮನೆ ಇರಬೇಕು, ಪ್ರತಿಯೊಂದು ಮನೆಗೂ ವಿದ್ಯುತ್ಸಂಪರ್ಕವಿರಬೇಕು, ಒಳ್ಳೆಯ ರಸ್ತೆಗಳಿರಬೇಕು, ಉತ್ತಮವಾದ ದೂರಸಂಪರ್ಕವ್ಯವಸ್ಥೆ ಇರಬೇಕು, ಆಧುನಿಕ ರೈಲ್ವೆ ಜಾಲವಿರಬೇಕು, ಕ್ಷಿಪ್ರ ಮತ್ತು ಸುಸ್ಥಿರಬೆಳವಣಿಗೆ ಇರಬೇಕು.

ಆದರೆ, ಇವಿಷ್ಷರಿಂದಲೇ ನವಭಾರತದ ನಿರ್ಮಾಣವಾಗುವುದಿಲ್ಲ. ನವಭಾರತವುಇವುಗಳ ಜೊತೆಗೆ, ನಮ್ಮ ರಕ್ತದ ಭಾಗವೇ ಆಗಿರುವ ಮನುಷ್ಯತ್ವವನ್ನು ನಾವುಮರೆಯಬಾರದು. ಏಕೆಂದರೆ, ನಮ್ಮ ಈ ಮಾನವೀಯ ಗುಣವೇ ನಮ್ಮ ದೇಶಕ್ಕೂನಾಗರಿಕತೆಗೂ ಆಧಾರಸ್ತಂಭವಾಗಿದೆ. ಭಾರತವು ಭವಿಷ್ಯದ ಕಡೆಗೆ ಮುನ್ನುಗ್ಗುವಸಮಾಜವಾದರಷ್ಟೇ ಸಾಲದು, ಅದರ ಜತೆಗೆ ಕರುಣೆಯಿಂದ ತುಂಬಿರುವ ಸಮೃದ್ಧಸಮಾಜವೂ ಆಗಬೇಕು.

* ಕರುಣೆಯಿಂದ ತುಂಬಿರುವ ಸಮಾಜದಲ್ಲಿ ಸಾಂಪ್ರದಾಯಿಕವಾಗಿಅವಕಾಶವಂಚಿತರಾಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಜನಾಂಗ ಮತ್ತು ಇತರಹಿಂದುಳಿದ ಜಾತಿಗಳ ಜನರೂ ನಮ್ಮ ರಾಷ್ಟ್ರೀಯ ಅಭಿವೃದ್ಧಿಯ ಭಾಗವಗಿರುತ್ತಾರೆ.

* ಸಹಾನುಭೂತಿಯ ಗುಣವಿರುವ ಸಮಾಜವು ಒಂಟಿತನವನ್ನು ಅನುಭವಿಸುತ್ತಿರುವಜನಸಮುದಾಯಗಳನ್ನು ಸಹ ತಮ್ಮವರೆಂದೇ ಭಾವಿಸಿ, ಅವರನ್ನು ತನ್ನ ಸೋದರ-ಸೋದರಿಯರೆಂದು ಬಗೆದು ಆಲಿಂಗಿಸಿಕೊಳ್ಳುತ್ತದೆ.

* ದಯಾಪರವಾದ ಒಂದು ಸಮಾಜವು ಅವಕಾಶವಂಚಿತವಾದ ಒಂದು ಮಗು, ವಯೋವೃದ್ಧರು ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಾಗರಿಕರುಮತ್ತು ಅವಕಾಶವಂಚಿತರ ಬಗ್ಗೆ ಸದಾ ಕಕ್ಕುಲತೆಯನ್ನು ಹೊಂದಿರುತ್ತದೆ. ಜತೆಗೆ, ನಮ್ಮ ದಿವ್ಯಾಂಗ ಸೋದರ-ಸೋದರಿಯರ ಬಗ್ಗೆ ಅದು ಯಾವಾಗಲೂ ವಿಶೇಷಕಾಳಜಿಯನ್ನು ವಹಿಸಿ, ಅವರಿಗೂ ಸಹ ಸಾಮಾನ್ಯರಂತೆಯೇ ಬದುಕಿನ ಎಲ್ಲರಂಗಗಳಲ್ಲೂ ಸಮಾನ ಅವಕಾಶಗಳು ಸಿಗುವಂತೆ ನೋಡಿಕೊಳ್ಳುತ್ತದೆ.

* ಸಹಾನುಭೂತಿ ಮತ್ತು ಸಮಾನತೆಯ ತತ್ವವನ್ನು ಮೈಗೂಡಿಸಿಕೊಂಡಿರುವಸಮಾಜವು ಲಿಂಗ ತಾರತಮ್ಯವನ್ನಾಗಲಿ, ಧಾರ್ಮಿಕ ಭೇದವನ್ನಾಗಲಿಮಾಡುವುದಿಲ್ಲ.

* ಸಹಾನುಭೂತಿಯಿಂದ ಕೂಡಿದ ಸಮಾಜವು ಮಾನವ ಸಂಪನ್ಮೂಲದಗುಣಮಟ್ಟವನ್ನು ಹೆಚ್ಚಿಸುವುದಲ್ಲದೆ, ನಮ್ಮ ಯುವಜನರಿಗೆ ವಿಶ್ವದರ್ಜೆಯ ಶಿಕ್ಷಣಸಂಸ್ಥೆಗಳು ಕೈಗೆಟುಕುವಂತೆ ಮಾಡುತ್ತದೆ. ಇಂಥ ಕಡೆಗಳಲ್ಲಿ ಆರೋಗ್ಯವಾಗಲಿ, ಪೌಷ್ಟಿಕತೆಯಾಗಲಿ ಸವಾಲಾಗಿ ಪರಿಣಮಿಸುವುದಿಲ್ಲ.

ಇವೆಲ್ಲವನ್ನೂ ಸಾಧಿಸುವ ಮೂಲಕ ಮಾತ್ರ ನಾವು ನವಭಾರತವನ್ನುನಿರ್ಮಿಸಬಹುದಷ್ಟೆ. ಇಲ್ಲಿ ಪ್ರತಿಯೊಬ್ಬ ಭಾರತೀಯರೂ ತಮ್ಮ ಶಕ್ತಿಸಾಮರ್ಥ್ಯಗಳನ್ನುಸಾಕಾರಗೊಳಿಸಿಕೊಳ್ಳಲು ಸಶಕ್ತರಾಗಿರಬೇಕು. ಆಗ ನಾವೆಲ್ಲರೂ ಸುಖ-ಸಂತೋಷಗಳಿಂದ ಇರಬಹುದು. ಜತೆಗೆ, ನಾವೆಲ್ಲರೂ ಈ ಸಮಾಜಕ್ಕೂ ದೇಶಕ್ಕೂನಮ್ಮನಮ್ಮ ಕೊಡುಗೆಯನ್ನು ನೀಡಲು ಇದರಿಂದ ಸಾಧ್ಯವಾಗಲಿದೆ.

ನಾಗರಿಕರು ಮತ್ತು ಸರಕಾರಗಳ ನಡುವಿನ ಶಕ್ತಿಯುತವಾದ ಸಹಭಾಗಿತ್ವವುನವಭಾರತ ನಿರ್ಮಾಣಕ್ಕೆ ಅಗತ್ಯವಾಗಿರುವ ಗುರಿಗಳನ್ನು ಮುಟ್ಟಲು ನೆರವಾಗಲಿದೆಎಂಬ ವಿಶ್ವಾಸ ನನಗಿದೆ.

ಸರಕಾರವು ಇತ್ತೀಚೆಗೆ ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದನಂತರದ ದಿನಗಳಲ್ಲಿ ನೀವೆಲ್ಲರೂ ಅಪಾರ ತಾಳ್ಮೆಯಿಂದ ನಡೆದುಕೊಂಡಿರಿ ಮತ್ತು ಆಸಂದರ್ಭದ ಗಹನತೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿರಿ. ದೇಶವುಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಸಾರಿರುವ ಈ ಸಮರಕ್ಕೆ ನೀವೆಲ್ಲರೂಹೃತ್ಪೂರ್ವಕವಾದ ಬೆಂಬಲ ಕೊಟ್ಟಿರಿ. ಇದು, ನಮ್ಮ ಸಮಾಜವು ಎಷ್ಟೊಂದುಹೊಣೆಗಾರಿಕೆಯ ಪ್ರಜ್ಞೆಯನ್ನೂ ದೊಡ್ಡ ಮಟ್ಟದ ಅರಿವನ್ನೂ ಒಳಗೊಂಡಿದೆಎನ್ನುವುದನ್ನು ಪ್ರತಿಫಲಿಸುತ್ತದೆ.

ನೋಟುಗಳ ಅಮಾನ್ಯೀಕರಣ/ರದ್ದತಿಯು ಒಂದು ಪ್ರಾಮಾಣಿಕ ಸಮಾಜವನ್ನುಕಟ್ಟುವ ನಮ್ಮ ಪ್ರಯತ್ನಗಳಿಗೆ ಬಲವನ್ನು ತುಂಬಿದೆ. ನಾವು ಈ ಉತ್ಸಾಹವನ್ನುಹೀಗೆಯೇ ಮುಂದುವರಿಸಿಕೊಂಡು ಹೋಗಬೇಕು.

ಸಹ ನಾಗರಿಕರೆ,

ನಾವು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ನಮ್ಮ ಜನರಸಬಲೀಕರಣಕ್ಕೆ ಹಾಗೂ ಒಂದೇ ತಲೆಮಾರಿನಲ್ಲಿ ಬಡತನ ನಿವಾರಣೆಯ ಗುರಿಸಾಧಿಸುವ ಸಲುವಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕಿದೆ. ಬಡತನ ಮತ್ತು ನವಭಾರತ ಎರಡೂ ಸಹವರ್ತಿಗಳಾಗುವುದು ಸಾಧ್ಯವಿಲ್ಲ.

ಇಂದು ಜಗತ್ತು ಭಾರತವನ್ನು ಮೆಚ್ಚುಗೆಯಿಂದ ನೋಡುತ್ತಿದೆ. ನಮ್ಮ ದೇಶವನ್ನು ಒಬ್ಬಜವಾಬ್ದಾರಿಯುತ ಜಾಗತಿಕ ಪ್ರಜೆಯಾಗಿ, ಒಂದು ಪ್ರಗತಿಹೊಂದುತ್ತಿರುವಅರ್ಥವ್ಯವಸ್ಥೆಯಾಗಿ, ಹವಾಮಾನ ಬದಲಾವಣೆ, ವಿಕೋಪಗಳು, ಸಂಘರ್ಷಗಳು, ಮಾನವೀಯತೆಯ ಬಿಕ್ಕಟ್ಟುಗಳು, ಮೂಲಭೂತವಾದ ಮತ್ತುಭಯೋತ್ಪಾದನೆಯಂತಹ ಹಲವಾರು ಸಮಸ್ಯೆಗಳಿಗೆ ಪರಿಹಾರ ಒದಗಿಸುವವನಾಗಿಪರಿಗಣಿಸಲಾಗುತ್ತಿದೆ.

2020ರ ಟೋಕಿಯೋ ಒಲಿಂಪಿಕ್ಸ್ ಜಗತ್ತಿನ ದೃಷ್ಟಿಯಲ್ಲಿ ನಾವು ಮತ್ತೊಮ್ಮೆ ಉನ್ನತಸ್ಥಾನಕ್ಕೇರುವ ಅವಕಾಶ ಒದಗಿಸಿದೆ. ಮುಂದಿನ ಮೂರು ವರ್ಷಗಳ ಕಾಲ ನಾವುಈ ರಾಷ್ಟ್ರೀಯ ಅಭಿಯಾನದಲ್ಲಿ ನಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳಬೇಕಿದೆ. ನಮ್ಮ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಗುರುತಿಸಿ, ಅವರನ್ನು ಬೆಂಬಲಿಸಲುಹಾಗೂ ಅವರು ಟೋಕೊಯೋದಲ್ಲಿ ಇನ್ನಷ್ಟು ಯಶಸ್ವಿಯಾಗುವುದಕ್ಕಾಗಿ ಅವರಿಗೆವಿಶ್ವದರ್ಜೆಯ ತರಬೇತಿ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರಿ ಸಂಸ್ಥೆಗಳು, ಕ್ರೀಡಾಪ್ರಾಧಿಕಾರಗಳು ಹಾಗೂ ವ್ಯಾಪಾರಿ ಉದ್ದಿಮೆಗಳು ಕೈಜೋಡಿಸುವುದುಅಗತ್ಯವಾಗಿದೆ.

ಭಾರತದ ನಾಗರಿಕರರು ಹಾಗೂ ಮಕ್ಕಳಾಗಿ – ನಾವು ದೇಶದಲ್ಲಿರುತ್ತೇವೆಯೋಅಥವಾ ವಿದೇಶದಲ್ಲಿರುತ್ತೇವೆಯೋ – ನಾವು ದೇಶದ ಹಿರಿಮೆಗೆ ಹೇಗೆ ನಮ್ಮಕೊಡುಗೆ ನೀಡಬಹುದೆಂಬುದನ್ನು ಪ್ರಶ್ನಿಸಿಕೊಳ್ಳಬೇಕು.

ಸಹ ನಾಗರಿಕರೆ,

ನಾನು ನಮ್ಮ ಕುಟುಂಬಗಳ ಬಗ್ಗೆ ಯೋಚಿಸುವುದು ಸಹಜ. ಆದರೆ ನಾವು ಸಮಾಜದಕುರಿತು ಕೂಡ ಯೋಚಿಸಬೇಕು. ನಿಸ್ವಾರ್ಥತೆಯ ಕರೆಗೆ ಓಗೊಟ್ಟು, ಕರ್ತವ್ಯದಿಂದಾಚೆಗೂ ಒಂದಿಷ್ಟು ಕೆಲಸಮಾಡಲು ಮುಂದಾಗಬೇಕು, ತನ್ನಮಗುವನ್ನು ಪೋಷಿಸಿ ಬೆಳೆಸುವ ತಾಯಿ ಕೇವಲ ತನ್ನ ಕರ್ತವ್ಯವನ್ನಷ್ಟೆಮಾಡುವುದಿಲ್ಲ. ಆಕೆ ಒಂದು ಅನನ್ಯ ನಿಸ್ವಾರ್ಥತೆಯನ್ನು ಬಿಂಬಿಸುತ್ತಾಳೆ.

• ಮರಳುಗಾಡಿನ ಸುಡುಬಿಸಿಲಿನಲ್ಲಿ ಅಥವಾ ಮಂಜುಗಟ್ಟಿದ ಪರ್ವತಗಳಲ್ಲಿ ನಮ್ಮಗಡಿಗಳನ್ನು ಕಾಯುವ ಯೋಧರು ಕೇವಲ ತಮ್ಮ ಕರ್ತವ್ಯವನ್ನಷ್ಟೆ ಮಾಡುತ್ತಿಲ್ಲ; ಅವರು ಒಂದಿಷ್ಟು ಹೆಚ್ಚಿನ ಮಟ್ಟದ ನಿಸ್ವಾರ್ಥತೆಯನ್ನು ಬಿಂಬಿಸುತ್ತಾರೆ.

• ಭಯೋತ್ಪಾದಕತೆ ಅಥವಾ ಅಪರಾಧ ನಿಗ್ರಹಕ್ಕಾಗಿ ತಮ್ಮ ಪ್ರಾಣವನ್ನೇಪಣತೊಡುವ ಮತ್ತು ನಮ್ಮ ಸುರಕ್ಷಿತವಾಗಿಡುವ ನಮ್ಮ ಪೊಲೀಸರು ಅಥವಾಅರೆಸೇನಾ ಪಡೆಗಳು ಕೇವಲ ತಮ್ಮ ಕರ್ತವ್ಯವನ್ನಷ್ಟೆ ಮಾಡುತ್ತಿಲ್ಲ; ಅವರು ಒಂದಿಷ್ಟುಹೆಚ್ಚಿನ ಮಟ್ಟದ ನಿಸ್ವಾರ್ಥತೆಯನ್ನು ಬಿಂಬಿಸುತ್ತಾರೆ.

• ದೇಶದ ಯಾವುದೋ ಮೂಲೆಯಲ್ಲಿರುವ, ತಾವು ಇದು ವರೆಗೆ ಭೇಟಿಮಾಡದ ಸಹ-ಭಾರತೀಯರಿಗಾಗಿ ನಮ್ಮ ರೈತರು ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಆಹಾರಬೆಳೆಯುವ ಮೂಲಕ ತಮ್ಮ ಕರ್ತವ್ಯವನ್ನಷ್ಟೆ ಮಾಡುತ್ತಿಲ್ಲ; ಅವರು ಒಂದಿಷ್ಟು ಹೆಚ್ಚಿನಮಟ್ಟದ ನಿಸ್ವಾರ್ಥತೆಯನ್ನು ಬಿಂಬಿಸುತ್ತಾರೆ.

• ನೈಸರ್ಗಿಕ ವಿಕೋಪಗಳ ಬಳಿಕ ಅನೇಕ ಪ್ರೇರಿತ ಜನರು, ನಾಗರಿಕ ಸಮಾಜದಗುಂಪುಗಳು ಹಾಗೂ ಸಾರ್ವಜನಿಕ ಸಂಸ್ಥೆಗಳು ರಕ್ಷಣೆ ಹಾಗೂ ಪರಿಹಾರಕಾರ್ಯಾಚರಣೆಗಾಗಿ ಹಗಲಿರುಳು ಪರಿಶ್ರಮಪಡುತ್ತಾರೆ. ಈ ಮೂಲಕ ಅವರುಒಂದಿಷ್ಟು ಹೆಚ್ಚಿನ ಮಟ್ಟದ ನಿಸ್ವಾರ್ಥತೆಯನ್ನು ಬಿಂಬಿಸುತ್ತಾರೆ.

ನಾವು ಪ್ರತಿಯೊಬ್ಬರೂ ಈ ನಿಸ್ವಾರ್ಥತೆಯ ಸ್ಫೂರ್ತಿಯನ್ನುಮೈಗೂಡಿಸಿಕೊಳ್ಳಬಾರದೇಕೆ?

ನಾವು ಮಾಡಬಲ್ಲೆವು ಮತ್ತು ಮಾಡಿದ್ದೇವೆ.

ಪ್ರಧಾನಮಂತ್ರಿ ಅವರ ಮನವಿ ಮೇರೆಗೆ, ಬಡ ಕುಟುಂಬಗಳ ಅಡುಗೆ ಮನೆಗಳಿಗೆಅಡುಗೆ ಅನಿಲ ಸಿಲಿಂಡರ್ ತಲುಪುವಂತಾಗಲು, ಒಂದು ಕೋಟಿಗೂ ಹೆಚ್ಚುಕುಟುಂಬಗಳು ಸ್ವಪ್ರೇರಣೆಯಿಂದ ತಮ್ಮ ಎಲ್ ಪಿ ಜಿ ಇಂಧನ ಸಬ್ಸಿಡಿಯನ್ನುತ್ಯಜಿಸಿವೆ. ಈ ಕ್ರಮ ಬಡಕುಟುಂಬಗಳ ಸದಸ್ಯರು, ಮುಖ್ಯವಾಗಿ ಮಹಿಳೆಯರು, ತಮ್ಮ ಕಣ್ಣುಗಳು ಮತ್ತು ಶ್ವಾಸಕೋಶಕ್ಕೆ ಹಾನಿಮಾಡುತ್ತಿದ್ದ ಒಲೆಯ ಹೊಗೆಯಿಂದಪಾರಾಗುವುದಕ್ಕೆ ಎಡೆಮಾಡಿಕೊಡುತ್ತದೆ.

ಸಬ್ಸಿಡಿ ತ್ಯಜಿಸಿದ ಎಲ್ಲ ಕುಟುಂಬಳಗನ್ನು ನಾನು ಅಭಿನಂದಿಸುತ್ತೇನೆ. ಯಾವುದೇಕಾನೂನು ಅಥವಾ ಸರ್ಕಾರಿ ಆದೇಶದನ್ವಯ ಅವರದನ್ನು ಮಾಡಿದ್ದಲ್ಲ. ಅವರೊಳಗಿನ ಪ್ರೇರಣೆಯಿಂದಲೆ ಇದು ಅಭಿವ್ಯಕ್ತಗೊಂಡಿದೆ.

ನಾವು ಈ ಕುಟುಂಬಗಳಿಂದ ಪ್ರೇರಣೆ ಪಡೆಯಬೇಕಿದೆ. ನಾವು ಪ್ರತಿಯೊಬ್ಬರೂಸಮಾಜಕ್ಕೆ ಹಿಂದಿರುಗಿಸುವ ಮಾರ್ಗೋಪಾಯದ ಬಗ್ಗೆ ಯೋಚಿಸಬೇಕು. ಸೌಲಭ್ಯವಂಚಿತರಿಗಾಗಿ ನಾವು ಮಾಡಬಹುದಾದ ಏನಾದರೊಂದನ್ನುಆಯ್ಕೆಮಾಡಿಕೊಳ್ಳಬೇಕು.

ಮುಂಬರುವ ಪೀಳಿಗೆಯನ್ನು ಸಜ್ಜುಗೊಳಿಸುವುದು ನಮ್ಮ ರಾಷ್ಟ್ರ ನಿರ್ಮಾಣದಹಾದಿಯಲ್ಲಿನ ಏಕೈಕ ನಿರ್ಣಾಯಕ ಅಂಶ. ಯಾವೊಂದು ಮಗುವೂಹಿಂದುಳಿಯದಂತೆ ಖಾತ್ರಿಪಡಿಸಬೇಕಿದೆ. ನಮ್ಮ ಸಮಾಜದಲ್ಲಿನ ಸವಲತ್ತು ಕೊರತೆಎದುರಿಸುತ್ತಿರುವ ಮಕ್ಕಳ ಶಿಕ್ಷಣಕ್ಕೆ ಸಹಾಯಮಾಡುವಂತೆ ರಾಷ್ಟ್ರನಿರ್ಮಾಣದಲ್ಲಿತೊಡಗಿರುವ ಸಹವರ್ತಿಗಳಿಗೆ ಮನವಿಮಾಡುತ್ತೇನೆ. ನಿಮ್ಮ ಮಕ್ಕಳ ಹೊರತಾಗಿಇನ್ನೊಂದು ಮಗುವಿಗೆ ಬೋಧಿಸಲು ಮುಂದಾಗಿ. ನಿಮ್ಮ ಮಕ್ಕಳ ಹೊರತಾಗಿ ಕನಿಷ್ಠಒಂದು ಮಗುವನ್ನು ಶಾಲೆಗೆ ಸೇರಿಸಿ, ಶಾಲಾ ಶುಲ್ಕ ತುಂಬಿ ಅಥವಾ ಪಠ್ಯಪುಸ್ತಕಗಳನ್ನು ಖರೀದಿಸಿಕೊಡಿ. ಕೇವಲ ಒಂದು ಮಗು!

ನಮ್ಮ ಭಾರತ ಮಹತ್ಸಾಧನೆಗಳ ಹೊಸ್ತಿಲಲ್ಲಿದೆ. ಇನ್ನು ಕೆಲವೇ ವರ್ಷಗಳಲ್ಲಿ ದೇಶಸಂಪೂರ್ಣ ಸಾಕ್ಷರತಾ ಸಮಾಜವಾಗಲಿದೆ. ನಾವು ಗುರಿಯನ್ನು ಇನ್ನೂಎತ್ತರಕ್ಕೇರಿಸಿ, ಸಂಪೂರ್ಣ ಶಿಕ್ಷಣಪಡೆದ ಸಮಾಜ ಸಾಕಾರಗೊಳಿಸುವತ್ತ ಲಕ್ಷ್ಯವಹಿಸಬೇಕಿದೆ.

ಈ ಅಭಿಯಾನದಲ್ಲಿ ನಾವೆಲ್ಲರ ಪಾತ್ರವೂ ಇದೆ. ನಾವಿದನ್ನು ಸಾಧಿಸಿದರೆ, ನಮ್ಮದೇಶ ನಮ್ಮ ಕಣ್ಣೆದುರೇ ಪರಿವರ್ತನೆ ಹೊಂದಲಿದೆ. ನಾವು ಈ ಮಹತ್ವದಪರಿವರ್ತನೆಯ ಕಾರ್ಯಭಾರಿಗಳಾಗುತ್ತೇವೆ.

ಎರಡು ಸಾವಿರದ ಐದು ನೂರು ವರ್ಷಗಳ ಹಿಂದೆ ಗೌತಮ ಬುದ್ಧ ಹೇಳಿದ್ದರು, “ಅಪ್ಪದೀಪೋಭವ...ನಿನಗೆ ನೀನೇ ದೀಪವಾಗು...” ನಾವು ಅವರಬೋಧನೆಗಳನ್ನು ಅನುಸರಿಸಿದರೆ, ನಮ್ಮ ಸ್ವಾತಂತ್ರ್ಯ ಆಂದೋಲನದಮನೋಭಾವದೊಂದಿಗೆ, ಒಗ್ಗೂಡಿ ಪ್ರಯತ್ನಿಸಿದರೆ, ನಾವೆಲ್ಲ ಒಟ್ಟಾರೆಯಾಗಿ ನವಭಾರತ ನಿರ್ಮಾಣದ ಹಾದಿಯನ್ನು ಬೆಳಗುವ 125 ಕೋಟಿ ದೀಪಗಳಾಗುತ್ತೇವೆ.

ಮತ್ತೊಮ್ಮೆ ನಾನು 71ನೇ ಸ್ವಾತಂತ್ರ್ಯೋತ್ಸವದ ಮುನ್ನಾ ದಿನ ನಿಮಗೆಲ್ಲರಿಗೂ ಶುಭಹಾರೈಸುತ್ತೇನೆ.

ಜೈ ಹಿಂದ್

ವಂದೇ ಮಾತರಂ